ದುಬೈ: ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್ ಪ್ರಜೆಯೊಬ್ಬರು ಕಳೆದುಕೊಂಡಿದ್ದ, ಸುಮಾರು 1,03,880 ದಿರ್ಹಮ್ (ಅಂದಾಜು 27 ಲಕ್ಷ ರೂಪಾಯಿಗಿಂತಲೂ ಹೆಚ್ಚು) ಮೌಲ್ಯದ ಐಷಾರಾಮಿ ಕೈಗಡಿಯಾರಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿದ್ದ ಬ್ಯಾಗ್ ಅನ್ನು ದುಬೈ ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತ್ವರಿತವಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಪ್ರಯಾಣಿಕರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಆಗಮನ ಹಾಲ್‌ನಲ್ಲಿರುವ 'ಲಾಸ್ಟ್ ಅಂಡ್ ಫೌಂಡ್' (Lost and Found) ಕಚೇರಿಗೆ ದೂರು ನೀಡಿದ ತಕ್ಷಣವೇ ಪೊಲೀಸರು ಭದ್ರತಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಈ ಕುರಿತು ಮಾಹಿತಿ ನೀಡಿದ ಡಿಎಕ್ಸ್‌ಬಿ ಟರ್ಮಿನಲ್ 1 ಸೆಕ್ಯುರಿಟಿಯ ನಿರ್ದೇಶಕ ಕರ್ನಲ್ ಅಬ್ದುಲ್ಲಾ ಫೈಸಲ್ ಅಲ್ ದೋಸಾರಿ, "ದೂರು ಬಂದ ತಕ್ಷಣ ಕಾರ್ಯಾಚರಣಾ ಕೊಠಡಿಯು ತ್ವರಿತವಾಗಿ ಸ್ಪಂದಿಸಿತು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪ್ರಯಾಣಿಕರ ಚಲನವಲನಗಳನ್ನು ಪರಿಶೀಲಿಸಲಾಯಿತು ಮತ್ತು ಕಾಣೆಯಾದ ವಸ್ತುವನ್ನು ಹುಡುಕಲು ವಿಶೇಷ ಪಾದಚಾರಿ ಗಸ್ತು ತಂಡವನ್ನು ನಿಯೋಜಿಸಲಾಯಿತು" ಎಂದು ತಿಳಿಸಿದರು.
ಬ್ಯಾಗ್‌ನಲ್ಲಿದ್ದ ಐಷರಾಮಿ ವಸ್ತುಗಳು
ಜನನಿಬಿಡ ಆಗಮನ ಪ್ರದೇಶದಲ್ಲಿ ಯಾರೂ ಗಮನಿಸದೇ ಬಿದ್ದಿದ್ದ ಬ್ಯಾಗ್ ಅನ್ನು ಗಸ್ತು ತಿರುಗುತ್ತಿದ್ದ ತಂಡವು ಯಶಸ್ವಿಯಾಗಿ ಪತ್ತೆಹಚ್ಚಿತು. ಲಗೇಜ್ ಪರಿಶೀಲಿಸಿದಾಗ ಅದರಲ್ಲಿ ಒಟ್ಟು 27 ಲಕ್ಷ ರೂ. ಮೌಲ್ಯದ ಮೂರು ಐಷಾರಾಮಿ ಕೈಗಡಿಯಾರಗಳು, ಒಂದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಸಾಧನ ಸುರಕ್ಷಿತವಾಗಿರುವುದು ಕಂಡುಬಂದಿದೆ.
ಮಾಲೀಕತ್ವದ ಪರಿಶೀಲನೆ ಮತ್ತು ಪ್ರಯಾಣಿಕರ ಪ್ರಶಂಸೆ
ಮಾಲೀಕತ್ವವನ್ನು ದೃಢೀಕರಿಸಲು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪ್ರಮಾಣಿತ ಪರಿಶೀಲನಾ ಪ್ರೋಟೋಕಾಲ್‌ಗಳು ಮತ್ತು ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಿ, ಬ್ಯಾಗ್ ಮತ್ತು ಅದಲ್ಲಿದ್ದ ವಸ್ತುಗಳನ್ನು ಔಪಚಾರಿಕವಾಗಿ ಆ ಪ್ರಯಾಣಿಕರಿಗೆ ಹಸ್ತಾಂತರಿಸಿದರು.
ಕಳೆದುಹೋದ ಕೆಲವೇ ಗಂಟೆಗಳಲ್ಲಿ ಇಷ್ಟು ದೊಡ್ಡ ಮೊತ್ತದ ವಸ್ತುಗಳನ್ನು ಅತ್ಯಂತ ಸುರಕ್ಷಿತವಾಗಿ ಮರಳಿ ತಂದುಕೊಟ್ಟ ದುಬೈ ಪೊಲೀಸರ ಪ್ರಾಮಾಣಿಕತೆ, ತಾಂತ್ರಿಕ ಸಾಮರ್ಥ್ಯ ಮತ್ತು ತ್ವರಿತ ಕಾರ್ಯವೈಖರಿಯನ್ನು ಕಂಡು ಪ್ರಯಾಣಿಕರು ವಿಸ್ಮಯಗೊಂಡರು. ಪೊಲೀಸರ ಈ ಅದ್ಭುತ ಸೇವೆಗೆ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
