01 October 2026 |

ಫ್ಲೈದುಬೈ(flydubai) ವಿಮಾನದಲ್ಲಿ ಗಂಭೀರ ಘಟನೆ; ಭಾರತೀಯ ಕ್ಯಾಪ್ಟನ್‌ಗೆ ಗಾಯ, 170ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತ

  • 01 Oct 2026 01:20:46 AM

ದುಬೈ: ದುಬೈಯಿಂದ ಇಸ್ರೇಲ್ ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ ಬುಧವಾರ ಗಂಭೀರ ಘಟನೆ ನಡೆದಿದ್ದು, ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತುರ್ತು ರೀತಿಯಲ್ಲಿ ತಿರುಗಿಸಿ ಸುರಕ್ಷಿತವಾಗಿ ಇಳಿಸಲಾಗಿದೆ.

 

ವರದಿಗಳ ಪ್ರಕಾರ, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ನಡುವೆ ಕಾಕ್‌ಪಿಟ್‌ನಲ್ಲಿ ಹಿಂಸಾತ್ಮಕ ಸಂಘರ್ಷ ನಡೆದಿದೆ. ಈ ವೇಳೆ ಸಹ ಪೈಲಟ್ ಕ್ಯಾಪ್ಟನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ಇಸ್ರೇಲಿ ಅಧಿಕಾರಿಗಳು ಆರೋಪಿಸಿದ್ದಾರೆ. ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. 

 

ಘಟನೆಯ ಸಂದರ್ಭದಲ್ಲಿ ವಿಮಾನವು ಕೆಲವೇ ಸಮಯದಲ್ಲಿ ಸಾವಿರಾರು ಅಡಿ ಎತ್ತರ ಕಳೆದುಕೊಂಡಿರುವುದು ಫ್ಲೈಟ್ ಟ್ರ್ಯಾಕಿಂಗ್ ಮಾಹಿತಿಯಿಂದ ತಿಳಿದುಬಂದಿದೆ. Reuters ವರದಿ ಪ್ರಕಾರ, ವಿಮಾನ ಸುಮಾರು 14,000 ಅಡಿಗೂ ಹೆಚ್ಚು ಎತ್ತರವನ್ನು ಸುಮಾರು 30 ಸೆಕೆಂಡ್‌ಗಳಲ್ಲಿ ಕಳೆದುಕೊಂಡಿತ್ತು. 

 

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಹೆಚ್ಚುವರಿ ಫ್ಲೈದುಬೈ ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನೆರವಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನ Prince Sultan bin Abdulaziz International Airport‌ಗೆ ತಿರುಗಿಸಲಾಯಿತು.

 

ಸೌದಿ ವಿಮಾನ ನಿಲ್ದಾಣದ ಮಾಹಿತಿಯ ಪ್ರಕಾರ, ವಿಮಾನವು ಬೆಳಗ್ಗೆ ತುರ್ತು ಲ್ಯಾಂಡಿಂಗ್ ಮಾಡಿದ್ದು, ಕ್ಯಾಪ್ಟನ್ ಮತ್ತು ಸಹ ಪೈಲಟ್ ಇಬ್ಬರೂ ಗಾಯಗೊಂಡಿದ್ದರು. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ನಂತರ ಬದಲಿ ವಿಮಾನದ ಮೂಲಕ ತಮ್ಮ ಅಂತಿಮ ಗಮ್ಯಸ್ಥಾನಕ್ಕೆ ತೆರಳಿದ್ದಾರೆ. 

 

ಘಟನೆಯಲ್ಲಿ ಭಾಗಿಯಾಗಿದ್ದ ಸಹ ಪೈಲಟ್ ಒಮಾನ್ ದೇಶದವರು ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಸೌದಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

 

ಘಟನೆಯ ಉದ್ದೇಶದ ಬಗ್ಗೆ ಇನ್ನೂ ಅಧಿಕೃತವಾಗಿ ಅಂತಿಮ ನಿರ್ಧಾರವಾಗಿಲ್ಲ. ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸುವ ಪ್ರಯತ್ನ ಅಥವಾ ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಎಂಬ ಸಾಧ್ಯತೆಯನ್ನು ಇಸ್ರೇಲಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ ಫ್ಲೈದುಬೈ ಸಂಸ್ಥೆ ಘಟನೆಯ ನಿಖರ ಕಾರಣ ಮತ್ತು ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದ್ದು, ಅಂತಿಮ ನಿರ್ಧಾರಕ್ಕೆ ಮುನ್ನ ಊಹಾಪೋಹಗಳನ್ನು ತಪ್ಪಿಸುವಂತೆ ಸೂಚಿಸಿದೆ. ಘಟನೆ ಕುರಿತು ಸೌದಿ ಹಾಗೂ ಇತರ ಸಂಬಂಧಿತ ಅಧಿಕಾರಿಗಳ ತನಿಖೆ ಮುಂದುವರಿದಿದೆ.