ದುಬೈ: UAEಯಲ್ಲಿನ ಪ್ರಮುಖ ಕನ್ನಡ ಸಂಘಟನೆಗಳಲ್ಲಿ ಒಂದಾದ ಕನ್ನಡಿಗರ ಕೂಟ, ದುಬೈಯ ಪ್ರತಿನಿಧಿ ಮಂಡಳಿ, ಹೊಸದಾಗಿ ನೇಮಕಗೊಂಡಿರುವ ಭಾರತದ ದುಬೈ ಕಾನ್ಸುಲ್ ಜನರಲ್ ಡಾ. ವಿಷ್ಣು ವರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿ, ದುಬೈ ಹಾಗೂ UAEಯಲ್ಲಿರುವ ಕನ್ನಡಿಗರ ಪರವಾಗಿ ಆತ್ಮೀಯ ಸ್ವಾಗತ ಕೋರಿತು.
ಕೂಟದ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ಕಳೆದ 24 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕನ್ನಡಿಗರ ಕೂಟ ನೀಡುತ್ತಿರುವ ಮಹತ್ವದ ಕೊಡುಗೆಗಳ ಕುರಿತು ಡಾ. ರೆಡ್ಡಿ ಅವರಿಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮುದಾಯಮುಖಿ ಕಾರ್ಯಕ್ರಮಗಳು ಹಾಗೂ ಕಲ್ಯಾಣ ಸೇವೆಗಳನ್ನು ವಿಸ್ತರಿಸುವ ಬದ್ಧತೆಯನ್ನೂ ಅವರು ವ್ಯಕ್ತಪಡಿಸಿದರು.
ಕನ್ನಡಿಗರ ಕೂಟದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ವಿಷ್ಣು ವರ್ಧನ ರೆಡ್ಡಿ ಅವರು, ಕಾನ್ಸುಲೇಟ್‌ನ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯೆ ಉಮಾ ವಿದ್ಯಾಧರ ಹಾಗೂ ಕೋರ್ ಸಮಿತಿಯ ಸದಸ್ಯರಾದ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಪ್ರಧಾನ ಕಾರ್ಯದರ್ಶಿ ಚೇತನ್ ಸುಬ್ರಹ್ಮಣ್ಯ, ಸಂಯುಕ್ತ ಪ್ರಧಾನ ಕಾರ್ಯದರ್ಶಿ ದೀಪಕ್ ಸೋಮಶೇಖರ, ಖಜಾಂಚಿ ವಿನೀತ್ ರಾಜ್, ಸಾಂಸ್ಕೃತಿಕ ಕಾರ್ಯದರ್ಶಿ ವಿನಾಯಕ ಹೆಗಡೆ ಹಾಗೂ ಸಮಿತಿ ಸದಸ್ಯ ಲಕ್ಷ್ಮೀಶ ಭಾರದ್ವಾಜ್ ಉಪಸ್ಥಿತರಿದ್ದರು.





