ನವದೆಹಲಿ/ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ಸಂಬಂಧ ಇಂದು ಕೇವಲ ರಾಜತಾಂತ್ರಿಕ ಸ್ನೇಹಕ್ಕೆ ಸೀಮಿತವಾಗಿಲ್ಲ. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ರಕ್ಷಣೆ ಹಾಗೂ ಜನರ ನಡುವಿನ ಬಾಂಧವ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳು ವೇಗವಾಗಿ ಸಹಕಾರವನ್ನು ವಿಸ್ತರಿಸುತ್ತಿವೆ.
1970ರ ದಶಕದಲ್ಲಿ ಕೇವಲ 180 ಮಿಲಿಯನ್ ಅಮೆರಿಕನ್ ಡಾಲರ್ ಮಟ್ಟದಲ್ಲಿದ್ದ ಉಭಯ ರಾಷ್ಟ್ರಗಳ ವಾರ್ಷಿಕ ವ್ಯಾಪಾರವು, 2025–26ನೇ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ 101.25 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಕಳೆದ ವರ್ಷದ 100.03 ಬಿಲಿಯನ್ ಡಾಲರ್ ವ್ಯಾಪಾರವನ್ನು ಕೂಡ ಮೀರಿದ ದಾಖಲೆ ಸಾಧನೆಯಾಗಿದೆ.
ಭಾರತ–ಯುಎಇ ವ್ಯಾಪಾರ ಬೆಳೆದ ವಿವರ:
1970ರ ದಶಕ – 180 ಮಿಲಿಯನ್ ಡಾಲರ್
2023–24 – 83.7 ಬಿಲಿಯನ್ ಡಾಲರ್
2024–25 – 100.03 ಬಿಲಿಯನ್ ಡಾಲರ್
2025–26 – 101.25 ಬಿಲಿಯನ್ ಡಾಲರ್
ಈ ಬೆಳವಣಿಗೆಗೆ ಪ್ರಮುಖ ಕಾರಣವೇನು?
2022ರಲ್ಲಿ ಜಾರಿಗೆ ಬಂದ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (CEPA) ಭಾರತ–ಯುಎಇ ವ್ಯಾಪಾರಕ್ಕೆ ಹೊಸ ವೇಗ ನೀಡಿದೆ. ಈ ಒಪ್ಪಂದದಿಂದ ಅನೇಕ ಭಾರತೀಯ ಉತ್ಪನ್ನಗಳಿಗೆ ಯುಎಇ ಮಾರುಕಟ್ಟೆಯಲ್ಲಿ ಸುಂಕ ರಿಯಾಯಿತಿ ದೊರೆತಿದ್ದು, ರಫ್ತು ಸುಲಭವಾಗಿದೆ. ಜೊತೆಗೆ ಕಸ್ಟಮ್ಸ್ ಪ್ರಕ್ರಿಯೆಗಳು ಸರಳಗೊಂಡಿದ್ದು, ಉದ್ಯಮಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಭಾರತದ ಯುಎಇ ರಾಯಭಾರಿ ಕಚೇರಿ ತಿಳಿಸಿದೆ.
ಯಾವುದೆಲ್ಲ ಉತ್ಪನ್ನಗಳು ಹೆಚ್ಚು ರಫ್ತ್ತು ಮತ್ತು ಆಮದು ಹೆಚ್ಚಾಗಿ ಉಭಯ ದೇಶಗಳ ನಡುವೆ ನಡೆಯುತ್ತಿವೆ ಎಂದು ನೋಡಿದರೆ, ಭಾರತದಿಂದ ಯುಎಇಗೆ ರತ್ನಾಭರಣ, ಆಹಾರ ಪದಾರ್ಥಗಳು, ಜವಳಿ, ಔಷಧಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ರಫ್ತಾಗುತ್ತಿವೆ. ಯುಎಇಯಿಂದ ಭಾರತಕ್ಕೆ ಕಚ್ಚಾ ತೈಲ, ಎಲ್‌ಎನ್‌ಜಿ, ಚಿನ್ನ ಹಾಗೂ ಪೆಟ್ರೋಕೆಮಿಕಲ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿವೆ.
ಭಾರತೀಯರಿಗೆ ಇದರ ಮಹತ್ವವೇನು?
ಇಂದು ಯುಎಇಯಲ್ಲಿ ಸುಮಾರು 43 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದು, ಅವರು ಅಲ್ಲಿನ ಅತಿದೊಡ್ಡ ವಲಸಿಗ ಸಮುದಾಯವಾಗಿದ್ದಾರೆ. ಉದ್ಯೋಗ, ವ್ಯಾಪಾರ, ಹೂಡಿಕೆ ಹಾಗೂ ಹಣ ರವಾನೆ ಕ್ಷೇತ್ರಗಳಲ್ಲಿ ಈ ಸಂಬಂಧ ಭಾರತಕ್ಕೆ ಮಹತ್ವದ ಆರ್ಥಿಕ ಬಲ ನೀಡುತ್ತಿದೆ. ಯುಎಇ ಭಾರತಕ್ಕೆ ಅತಿದೊಡ್ಡ ಹಣ ರವಾನೆ ಮೂಲಗಳಲ್ಲಿ ಒಂದಾಗಿದೆ.
2026ರಲ್ಲಿ ಉಭಯ ರಾಷ್ಟ್ರಗಳ ನಾಯಕತ್ವವು 2032ರೊಳಗೆ ದ್ವಿಪಕ್ಷೀಯ ವ್ಯಾಪಾರವನ್ನು 200 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಘೋಷಿಸಿದೆ. ಇಂಧನ, ಕೃತಕ ಬುದ್ಧಿಮತ್ತೆ (AI), ಮೂಲಸೌಕರ್ಯ, ಆಹಾರ ಭದ್ರತೆ, ಹಣಕಾಸು ಸೇವೆಗಳು ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇನ್ನಷ್ಟು ಸಹಕಾರ ವಿಸ್ತರಿಸಲು ಎರಡೂ ದೇಶಗಳು ಮುಂದಾಗಿವೆ.
ಈ ಮೂಲಕ ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು,ಎರಡನೇ ಅತಿದೊಡ್ಡ ರಫ್ತು ಮಾರುಕಟ್ಟೆ ಕೂಡ ಹೊಂದಿದೆ. ಅದೇ ಪ್ರಕಾರ ಭಾರತವು ಯುಎಇಯ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿ ಹೊರಹೊಮ್ಮಿದೆ.
1970ರ ದಶಕದ 180 ಮಿಲಿಯನ್ ಡಾಲರ್ ವ್ಯಾಪಾರವು ಇಂದು 101.25 ಬಿಲಿಯನ್ ಡಾಲರ್‌ಗೆ ಏರಿರುವುದು ಉಭಯ ರಾಷ್ಟ್ರಗಳ ಬಲಿಷ್ಠ ಆರ್ಥಿಕ ಸಹಭಾಗಿತ್ವಕ್ಕೆ ಸಾಕ್ಷಿಯಾಗಿದೆ.





