02 July 2026 |

14ನೇ ವಯಸ್ಸಿನಲ್ಲೇ ದುಬೈಯ ಬುರ್ಜ್ ಖಲೀಫಾದಲ್ಲಿ ಕಚೇರಿ! ಭಾರತೀಯ ಮೂಲದ ಬಾಲಕನ ಸಾಧನೆಗೆ ಜಗತ್ತೇ ಬೆರಗು

  • 01 Jul 2026 06:05:25 PM

ದುಬೈ: ಬಹುತೇಕ 14 ವರ್ಷದ ಮಕ್ಕಳು ಶಾಲೆ, ಪಾಠ, ಪರೀಕ್ಷೆ ಹಾಗೂ ಆಟೋಟಗಳಲ್ಲೇ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ ಕೆಲವರು ತಮ್ಮ ಪ್ರತಿಭೆ, ದೃಢಸಂಕಲ್ಪ ಮತ್ತು ಹೊಸ ಆಲೋಚನೆಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಾರೆ. ಅಂತಹ ಅಪರೂಪದ ಪ್ರತಿಭೆಗಳಲ್ಲಿ ಒಬ್ಬನೇ ಭಾರತೀಯ ಮೂಲದ 14 ವರ್ಷದ ಜೈನಂ ಜೈನ್.

 

ಇನ್ನೂ ಹದಿಹರೆಯದಲ್ಲೇ ಜೈನಂ ದುಬೈಯ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ತನ್ನ AI ಆಧಾರಿತ ಕಂಪನಿ 'ಮೆಂಗೋ ಎಂಜಿನ್' (Mengo Engine) ಗೆ ಕಚೇರಿ ಆರಂಭಿಸಿ ಅಚ್ಚರಿಯ ಸಾಧನೆ ಮಾಡಿದ್ದಾರೆ. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಮಕ್ಕಳು ಶಾಲಾ ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ಜೈನಂ ತನ್ನ ಆಸಕ್ತಿಯನ್ನು ಉದ್ಯಮವಾಗಿ ರೂಪಿಸಿ ಹಲವರಿಗೆ ಸ್ಫೂರ್ತಿಯಾಗಿದ್ದಾನೆ.

 

ಮೆಂಗೋ ಎಂಜಿನ್ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಸ್ಥೆಯಾಗಿದ್ದು, ವಿವಿಧ ಕಂಪನಿಗಳು ತಮ್ಮ ವ್ಯವಹಾರದಲ್ಲಿ AI ಅನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತದೆ. ಉತ್ಪಾದಕತೆ ಹೆಚ್ಚಿಸುವುದು, ವ್ಯವಹಾರವನ್ನು ವಿಸ್ತರಿಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಸಂಸ್ಥೆಗಳಿಗೆ ನೆರವಾಗುವುದು ಇದರ ಪ್ರಮುಖ ಉದ್ದೇಶ.

 

ಇನ್ನಷ್ಟು ವಿಶೇಷವೆಂದರೆ, ಜೈನಂ ಅವರ ಕಚೇರಿ ಬುರ್ಜ್ ಖಲೀಫಾದ 141ನೇ ಮಹಡಿಯಲ್ಲಿ ಇದೆ. ಇಂತಹ ಪ್ರತಿಷ್ಠಿತ ಕಟ್ಟಡದಲ್ಲಿ ಕೇವಲ 14ನೇ ವಯಸ್ಸಿನಲ್ಲೇ ಕಚೇರಿ ಹೊಂದುವುದು ನಿಜಕ್ಕೂ ಅಪರೂಪದ ಸಾಧನೆ. ಜೈನಂ ಕೇವಲ ಉದ್ಯಮಿಯಷ್ಟೇ ಅಲ್ಲ. ಅವರು TEDx ಭಾಷಣಕಾರ ಹಾಗೂ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಷ್ಟೇ ಚಿಕ್ಕ ವಯಸ್ಸಿನಲ್ಲಿ ಈ ಮಟ್ಟದ ಸಾಧನೆ ಮಾಡಿರುವುದು ಅನೇಕ ಯುವಕರಿಗೆ ಪ್ರೇರಣೆಯಾಗಿದೆ.

 

ಜೈನಂ ಅವರ ಯಶೋಗಾಥೆ ಒಂದು ಮಹತ್ವದ ಸಂದೇಶವನ್ನು ಸಾರುತ್ತದೆ. 14 ವರ್ಷವಾಗಲಿ, 40 ವರ್ಷವಾಗಲಿ, ಕನಸುಗಳನ್ನು ನಿಜವಾಗಿಸುವ ಶಕ್ತಿ ನಮ್ಮ ದೃಢಸಂಕಲ್ಪದಲ್ಲಿದ್ದರೆ- ಪ್ರತಿಭೆ, ಕಲಿಯುವ ಆಸಕ್ತಿ, ಹೊಸದನ್ನು ಪ್ರಯತ್ನಿಸುವ ಧೈರ್ಯ ಮತ್ತು ನಿರಂತರ ಪರಿಶ್ರಮ ಇದ್ದರೆ ವಯಸ್ಸು ಅಡ್ಡಿಯಾಗುವುದಿಲ್ಲ. ಜೈನಂ ಜೈನ್ ಅವರ ಈ ಸಾಧನೆ, "ಕನಸುಗಳಿಗೆ ವಯಸ್ಸಿನ ಮಿತಿ ಇಲ್ಲ" ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.