03 July 2026 |

40°C ಬಿಸಿಯ ಆಘಾತ: ಯುರೋಪಿನಲ್ಲಿ ರಸ್ತೆಗಳೇ ಕರಗುತ್ತಿವೆ, ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

  • 02 Jul 2026 12:44:40 PM

ಯುರೋಪಿನ ಹಲವು ರಾಷ್ಟ್ರಗಳು ತೀವ್ರ ಬಿಸಿಗಾಳಿಯ ಸಂಕಷ್ಟವನ್ನು ಎದುರಿಸುತ್ತಿದ್ದು, ಕೆಲ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದೆ. ಈ ಅಸಹಜ ಉಷ್ಣತೆಯಿಂದ ರಸ್ತೆಗಳ ಮೇಲ್ಮೈ ಮೃದುವಾಗಿ ಕರಗಲಾರಂಭಿಸಿದ್ದು, ಸಾರಿಗೆ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.

 

ಬ್ರಿಟನ್‌ನಲ್ಲಿ ರಸ್ತೆಗಳು ಹಾಗೂ ಸಾರಿಗೆ ಮೂಲಸೌಕರ್ಯಗಳನ್ನು ಮುಖ್ಯವಾಗಿ ಚಳಿ, ಮಳೆ ಮತ್ತು ಹಿಮಪಾತದಂತಹ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಅಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ 20ರಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಮಾತ್ರ ತಾಪಮಾನ ದಾಖಲಾಗುತ್ತದೆ. ಆದರೆ ಈ ಬಾರಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗೂ ಸಮೀಪ ತಲುಪಿರುವುದರಿಂದ ರಸ್ತೆಗಳ ಮೇಲ್ಮೈ ಉಷ್ಣತೆಯನ್ನು ತಡೆಯಲಾಗದೆ ಡಾಂಬರು ಮೃದುವಾಗುತ್ತಿದೆ.

 

ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿ ರಸ್ತೆಗಳನ್ನು ಹೆಚ್ಚಿನ ಉಷ್ಣಾಂಶವನ್ನು ಸಹಿಸಬಲ್ಲ ರೀತಿಯಲ್ಲಿ ನಿರ್ಮಿಸಲಾಗುತ್ತದೆ. ದೇಶದ ವಿವಿಧ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಅನುಕೂಲವಾಗುವ ಗುಣಮಟ್ಟದ ಡಾಂಬರು ಮತ್ತು ನಿರ್ಮಾಣ ವಿಧಾನಗಳನ್ನು ಇಲ್ಲಿ ಬಳಸಲಾಗುತ್ತದೆ.

 

ಬ್ರಿಟನ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸುವ ಬಿಟುಮೆನ್‌ ಚಳಿಗಾಲದಲ್ಲಿ ಬಿರುಕು ಬೀಳದಂತೆ ಕಡಿಮೆ ತಾಪಮಾನದಲ್ಲಿಯೂ ಮೃದುವಾಗಿರುವ ಗುಣ ಹೊಂದಿರುತ್ತದೆ. ಆದರೆ ವಾತಾವರಣದ ತಾಪಮಾನ 30ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿದಾಗ ಕಪ್ಪು ಬಣ್ಣದ ರಸ್ತೆ ಮೇಲ್ಮೈ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಇದರಿಂದ ರಸ್ತೆಯ ಮೇಲ್ಮೈ ತಾಪಮಾನವು ವಾತಾವರಣದ ತಾಪಮಾನಕ್ಕಿಂತ ಸುಮಾರು 10ರಿಂದ 15 ಡಿಗ್ರಿ ಹೆಚ್ಚು ಏರಿಕೆಯಾಗುತ್ತದೆ. ಪರಿಣಾಮವಾಗಿ ಬಿಟುಮೆನ್ ಕರಗಲು ಆರಂಭಿಸುತ್ತದೆ.

 

ಜರ್ಮನಿಯಲ್ಲಿ ತಾಪಮಾನ 41.7 ಡಿಗ್ರಿ ಸೆಲ್ಸಿಯಸ್‌ಗೆ ಏರಿರುವ ಹಿನ್ನೆಲೆಯಲ್ಲಿ ಟ್ರಾಮ್ ಹಳಿಗಳ ಸುತ್ತ ಬಳಸುವ ಬಿಟುಮೆನ್ ಹಾಗೂ ರಬ್ಬರ್ ಮಿಶ್ರಿತ ಜಾಯಿಂಟ್ ಸೀಲರ್ ಸಂಪೂರ್ಣವಾಗಿ ಕರಗಿದೆ. ಕರಗಿದ ಈ ಜಿಗುಟಾದ ಪದಾರ್ಥ ಟ್ರಾಮ್ ಹಳಿಗಳು ಹಾಗೂ ಟ್ರ್ಯಾಕ್ ಸ್ವಿಚ್‌ಗಳ ಮಧ್ಯೆ ಹರಿದು ಬಳಿಕ ಗಟ್ಟಿಯಾಗಿರುವುದರಿಂದ ಟ್ರಾಮ್ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಅತಿಯಾದ ಶಾಖದಿಂದ ಲೋಹದ ಹಳಿಗಳು ವಿಸ್ತರಿಸಿ ಉಬ್ಬಿಕೊಂಡಿರುವ ಕಾರಣವೂ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಬೆಳವಣಿಗೆಯಿಂದ ಬ್ರಿಟನ್ ಸೇರಿದಂತೆ ಹಲವು ಯುರೋಪಿನ ರಾಷ್ಟ್ರಗಳು ಸಾರಿಗೆ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸುತ್ತಿವೆ ಎಂದು ವರಿದಿಗಳು ತಿಳಿಸುತ್ತದೆ.