12 July 2026 |

ವಿಶೇಷ ಬೆಳವಣಿಗೆ: ರಷ್ಯಾಕ್ಕೆ ಈಗ ಭಾರತದಿಂದ ಪೆಟ್ರೋಲ್ ಪೂರೈಕೆ!

  • 12 Jul 2026 01:31:42 PM

ನವದೆಹಲಿ/ಮಾಸ್ಕೋ: ವಿಶ್ವ ಇಂಧನ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಯೊಂದು ನಡೆದಿದೆ. ಇದುವರೆಗೆ ಭಾರತದ ಅತಿದೊಡ್ಡ ಕಚ್ಚಾ ತೈಲ (Crude Oil) ಪೂರೈಕೆದಾರನಾಗಿದ್ದ ರಷ್ಯಾ, ಇದೀಗ ಭಾರತದಿಂದಲೇ ಶುದ್ಧೀಕರಿಸಿದ ಪೆಟ್ರೋಲ್ (Gasoline) ಖರೀದಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.

 

2022ರಲ್ಲಿ ಉಕ್ರೇನ್ ಯುದ್ಧ ಆರಂಭವಾದ ಬಳಿಕ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದಲ್ಲಿನ ಅತ್ಯಾಧುನಿಕ ತೈಲ ಶುದ್ಧೀಕರಣ ಘಟಕಗಳಲ್ಲಿ ಈ ಕಚ್ಚಾ ತೈಲವನ್ನು ಸಂಸ್ಕರಿಸಿ ವಿವಿಧ ಇಂಧನ ಉತ್ಪನ್ನಗಳಾಗಿ ಪರಿವರ್ತಿಸಲಾಗುತ್ತಿದೆ.

 

ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಗಳಿಂದ ರಷ್ಯಾದ ಹಲವು ತೈಲ ಶುದ್ಧೀಕರಣ ಘಟಕಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮವಾಗಿ ದೇಶದ ಕೆಲವು ಭಾಗಗಳಲ್ಲಿ ಇಂಧನ ಪೂರೈಕೆಯ ಮೇಲೆ ಒತ್ತಡ ಉಂಟಾಗಿದ್ದು, ದೇಶೀಯ ಅಗತ್ಯಗಳನ್ನು ಪೂರೈಸಲು ರಷ್ಯಾ ತಾತ್ಕಾಲಿಕವಾಗಿ ಡೀಸೆಲ್ ರಫ್ತಿನ ಮೇಲೂ ನಿರ್ಬಂಧಗಳನ್ನು ವಿಧಿಸಿದೆ.

 

ಈ ಬೆಳವಣಿಗೆಯ ನಡುವೆಯೇ ಭಾರತದಲ್ಲಿ ಶುದ್ಧೀಕರಿಸಿದ ಪೆಟ್ರೋಲ್ ಅನ್ನು ಅಂತರರಾಷ್ಟ್ರೀಯ ವ್ಯಾಪಾರಿಗಳ ಮೂಲಕ ರಷ್ಯಾ ಖರೀದಿಸುತ್ತಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ವಿಶ್ವದ ಪ್ರಮುಖ ಸಂಸ್ಕರಿತ ಇಂಧನ ರಫ್ತುದಾರರಲ್ಲಿ ಒಂದಾಗಿರುವ ರಷ್ಯಾ, ಇದೇ ಮೊದಲ ಬಾರಿಗೆ ಭಾರತದಿಂದ ಪೆಟ್ರೋಲ್ ಖರೀದಿಸುತ್ತಿರುವುದು ಜಾಗತಿಕ ಇಂಧನ ವ್ಯಾಪಾರದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗಿದೆ.