21 July 2026 |

ಉಕ್ರೇನ್‌ನ ಒಡೆಸಾ ಬಂದರು ಸಮೀಪ ಕ್ಷಿಪಣಿ ದಾಳಿ; ನಾಲ್ವರು ಭಾರತೀಯರು ಸಾವು, ಒಬ್ಬರ ಸ್ಥಿತಿ ಗಂಭೀರ

  • 20 Jul 2026 10:25:41 PM

ಉಕ್ರೇನ್: ಉಕ್ರೇನ್‌ನ ಒಡೆಸಾ (Odesa) ಬಂದರು ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಸರಕು ಸಾಗಣೆ ಹಡಗು ಎಂವಿ ಗೋಲ್ಡನ್ ಲಿಯೋ (MV Golden Leo) ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಭಾರತೀಯ ನಾಗರಿಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಅವರಲ್ಲಿ ಐವರು ಭಾರತೀಯರಾಗಿದ್ದರು.  

 

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದನ್ನು “ಅತ್ಯಂತ ಖಂಡನೀಯ” ಘಟನೆ ಎಂದು ಹೇಳಿದೆ. ವಾಣಿಜ್ಯ ಹಡಗುಗಳ ಸುರಕ್ಷತೆ ಮತ್ತು ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳ ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯವಿದೆ ಎಂದು ಭಾರತ ಒತ್ತಿ ಹೇಳಿದೆ.  

 

ಉಕ್ರೇನ್ ಅಧಿಕಾರಿಗಳ ಪ್ರಕಾರ, ರಷ್ಯಾದ ಕ್ಷಿಪಣಿ ದಾಳಿಯಿಂದ ಹಡಗುಗೆ ಭಾರೀ ಹಾನಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆ ಕಪ್ಪು ಸಮುದ್ರ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಸಂಭವಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.