11 August 2026 |

ಅಬುಧಾಬಿಗೆ ಪ್ರವಾಸ ಹೋಗುವ ಭಾರತೀಯರಿಗೆ ಗುಡ್ ನ್ಯೂಸ್: UAE ವೀಸಾ ಉಚಿತ!

  • 10 Aug 2026 06:05:55 PM

ಅಬುಧಾಬಿ: ಅಬುಧಾಬಿಗೆ ಪ್ರವಾಸ ಕೈಗೊಳ್ಳಲು ಬಯಸುವ ಭಾರತೀಯರಿಗೆ ಸಂತಸದ ಸುದ್ದಿ ಹೊರ ಬಿದ್ದಿದೆ. ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅಬುಧಾಬಿ ಪ್ರವಾಸೋದ್ಯಮ ಇಲಾಖೆ ಹೊಸ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಇದರಡಿ ಅರ್ಹ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ನಿಗದಿತ ರಜಾ ಪ್ಯಾಕೇಜ್ ಬುಕ್ ಮಾಡಿದರೆ UAE ಪ್ರವೇಶ ವೀಸಾವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪಡೆಯಬಹುದು. 

 

ಈ ವಿಶೇಷ ಯೋಜನೆ 2026ರ ಆಗಸ್ಟ್ 1ರಿಂದ ಅಕ್ಟೋಬರ್ 31ರವರೆಗೆ ಜಾರಿಯಲ್ಲಿರಲಿದೆ. ಪ್ರಾಯೋಗಿಕ ಹಂತದಲ್ಲಿ ಗರಿಷ್ಠ 20,000 ವೀಸಾಗಳಿಗೆ ಈ ಸೌಲಭ್ಯ ನೀಡುವ ಉದ್ದೇಶವಿದೆ.

 

ಯಾರು ಈ ಸೌಲಭ್ಯ ಪಡೆಯಬಹುದು?

ಭಾರತದಿಂದ ಅಬುಧಾಬಿಗೆ ಪ್ರವಾಸ ಕೈಗೊಳ್ಳುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈ ಕೊಡುಗೆಗೆ ಅರ್ಹರಾಗಬಹುದು. ಆದರೆ ಕೆಲವು ಷರತ್ತುಗಳನ್ನು ಪೂರೈಸಬೇಕು.

 

  • ಅಬುಧಾಬಿಯಲ್ಲಿ ಕನಿಷ್ಠ 3 ಸತತ ರಾತ್ರಿ ಹೋಟೆಲ್ ವಾಸದ ಪ್ಯಾಕೇಜ್ ಬುಕ್ ಮಾಡಬೇಕು.
  • ಭಾರತದಿಂದ ಅಬುಧಾಬಿಗೆ ಹೋಗಿ-ಬರುವ ವಿಮಾನ ಟಿಕೆಟ್ ಪ್ಯಾಕೇಜ್‌ನಲ್ಲಿ ಇರಬೇಕು.
  • ಪ್ಯಾಕೇಜ್ ಅನ್ನು ಈ ಯೋಜನೆಯಲ್ಲಿ ಭಾಗವಹಿಸುವ ಅನುಮೋದಿತ ಟ್ರಾವೆಲ್ ಪಾಲುದಾರರು ಅಥವಾ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳ ಮೂಲಕ ಬುಕ್ ಮಾಡಬೇಕು. 

 

ಪ್ರತ್ಯೇಕವಾಗಿ ವೀಸಾ ಅರ್ಜಿ ಸಲ್ಲಿಸಬೇಕೇ?

ಈ ಯೋಜನೆಯಡಿ ಪ್ರವಾಸಿಗರು ಸ್ವತಂತ್ರವಾಗಿ ‘ಉಚಿತ ವೀಸಾ’ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಇಲ್ಲ. ಅರ್ಹ ಪ್ರವಾಸ ಪ್ಯಾಕೇಜ್ ಅನ್ನು ಭಾಗವಹಿಸುವ ಟ್ರಾವೆಲ್ ಪಾಲುದಾರರ ಮೂಲಕ ಬುಕ್ ಮಾಡಿದಾಗ, ವೀಸಾ ಪ್ರಕ್ರಿಯೆಯನ್ನು ಅವರೇ ನಿರ್ವಹಿಸಲಿದ್ದಾರೆ.

 

ಅಬುಧಾಬಿ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಈ ಯೋಜನೆಯ ಉದ್ದೇಶ ಭಾರತೀಯ ಪ್ರವಾಸಿಗರಿಗೆ ಅಬುಧಾಬಿ ಪ್ರವಾಸವನ್ನು ಇನ್ನಷ್ಟು ಸುಲಭಗೊಳಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದಾಗಿದೆ.