ಬ್ರಸೆಲ್ಸ್: ಬೆಲ್ಜಿಯಂನ ಸಿಂಟ್-ಗಿಲಿಸ್-ಡೆಂಡರ್ಮಾಂಡೆ ನಗರದಲ್ಲಿ ಚರಂಡಿ ನವೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಬರೋಬ್ಬರಿ 98 ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯಗಳು ಹಾಗೂ ಚಿನ್ನದ ಬಾರ್‌ಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಬ್ರಸೆಲ್ಸ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ 19ನೇ ಶತಮಾನದ ಹಳೆಯ ‘ಬ್ರೂವರ್ಸ್ ಹೌಸ್’ ಕಟ್ಟಡದ ಸಮೀಪ ಪೈಪ್‌ಲೈನ್ ಅಳವಡಿಸಲು ಭೂಮಿ ಅಗೆಯಲಾಗುತ್ತಿತ್ತು. ಈ ವೇಳೆ 18 ವರ್ಷದ ಕೊಬೆ ಹಾಗೂ ಆತನ ಸಹೋದ್ಯೋಗಿಗಳಿಗೆ ನೆಲದೊಳಗೆ ಕೆಲವು ನಾಣ್ಯಗಳು ಸಿಕ್ಕಿವೆ. ಆರಂಭದಲ್ಲಿ ಅವು ಸಾಮಾನ್ಯ 1 ಯುರೋ ನಾಣ್ಯಗಳಿರಬಹುದು ಎಂದು ಅವರು ಭಾವಿಸಿದ್ದರು. ಆದರೆ ಮತ್ತಷ್ಟು ಮಣ್ಣು ತೆರವುಗೊಳಿಸಿದಾಗ ಚಿನ್ನದ ಬಾರ್‌ಗಳು ಮತ್ತು ಚಿನ್ನದ ನಾಣ್ಯಗಳಿಂದ ತುಂಬಿದ್ದ ಚೀಲಗಳು ಪತ್ತೆಯಾಗಿವೆ.
ಘಟನೆಯ ಕುರಿತು ಕೊಬೆ ಸ್ಥಳೀಯ ಮಾಧ್ಯಮಗಳಿಗೆ ಮಾತನಾಡಿ, ಇಂತಹ ದೊಡ್ಡ ನಿಧಿ ಸಿಗುತ್ತದೆ ಎಂದು ತಾವು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಮೊದಲಿಗೆ ದೊರೆತ ನಾಣ್ಯಗಳನ್ನು ಸಾಮಾನ್ಯ ನಾಣ್ಯಗಳೆಂದು ಭಾವಿಸಿದ್ದೆವು. ಬಳಿಕ ಚಿನ್ನದ ಬಾರ್‌ಗಳು ಮತ್ತು ಬಿಸ್ಕತ್ತುಗಳು ಸಿಕ್ಕಾಗ ಅದರ ನಿಜವಾದ ಮೌಲ್ಯ ನಮಗೆ ಅರ್ಥವಾಯಿತು ಎಂದು ಹೇಳಿದ್ದಾರೆ.
ಈ ಸ್ಥಳದಲ್ಲಿದ್ದ ಮದ್ಯ ತಯಾರಿಕಾ ಘಟಕವನ್ನು 1899ರಲ್ಲಿ ಆರಂಭಿಸಲಾಗಿತ್ತು. 1970ರಲ್ಲಿ ಅದು ಮುಚ್ಚಲ್ಪಟ್ಟಿತ್ತು. ಅಲ್ಲಿನ ಹಿಂದಿನ ಮಾಲೀಕ ಥಿಯೋಫಿಲಸ್ ವ್ಯಾನ್ ಆಸ್ಟೆ ಅವರಿಗೆ ಈ ಚಿನ್ನದ ನಿಧಿ ಸೇರಿರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಪ್ರಸ್ತುತ ಸಿಎಡಬ್ಲ್ಯೂ ಎಂಬ ಕಲ್ಯಾಣ ಸಂಸ್ಥೆ ಈ ಪ್ರದೇಶದಲ್ಲಿ ಕಚೇರಿ ಹಾಗೂ ವಸತಿ ಸಂಕೀರ್ಣ ನಿರ್ಮಾಣದ ಕಾಮಗಾರಿ ನಡೆಸುತ್ತಿತ್ತು.
ನಿಧಿ ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಪತ್ತೆಯಾದ ಚಿನ್ನವನ್ನು ಬ್ರಸೆಲ್ಸ್‌ನ ಸುರಕ್ಷಿತ ವಾಲ್ಟ್‌ಗೆ ಸ್ಥಳಾಂತರಿಸಲಾಗಿದೆ. ಈ ನಿಧಿ ಯಾವುದೇ ಕಳ್ಳತನ ಅಥವಾ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಬೆಲ್ಜಿಯಂನ ಕಾನೂನು ಪ್ರಕಾರ, ನಿಧಿಯ ನಿಜವಾದ ವಾರಸುದಾರರು ಪತ್ತೆಯಾಗಲು ಐದು ವರ್ಷಗಳವರೆಗೆ ಕಾಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಟ್ಟಡದ ಪ್ರಸ್ತುತ ಮಾಲೀಕರು, ಕಾಮಗಾರಿ ನಡೆಸುತ್ತಿರುವ ಸಂಸ್ಥೆ ಮತ್ತು ಹಿಂದಿನ ಮಾಲೀಕರ ಕುಟುಂಬದವರ ನಡುವೆ ನಿಧಿಯ ಹಕ್ಕು ಕುರಿತು ಕಾನೂನು ವಿವಾದ ಉಂಟಾಗುವ ಸಾಧ್ಯತೆಯಿದೆ. ನಿಧಿಯನ್ನು ಅಧಿಕಾರಿಗಳಿಗೆ ಒಪ್ಪಿಸಿದ ಕಾರ್ಮಿಕರಿಗೆ ಬಹುಮಾನ ನೀಡುವ ಸಾಧ್ಯತೆಯೂ ಇದೆ.





