ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿರುವುದಾಗಿ ಘೋಷಿಸಿದ್ದು, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹೋರ್ಮುಜ್ ಜಲಸಂಧಿಯನ್ನು ಯಾವುದೇ ಶುಲ್ಕವಿಲ್ಲದೆ ತೆರೆಯಲು ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.
ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅಮೆರಿಕದ ನೌಕಾಪಡೆಯ ನಿರ್ಬಂಧವನ್ನೂ ತಕ್ಷಣದಿಂದಲೇ ತೆಗೆದುಹಾಕಲು ಆದೇಶಿಸಿರುವುದಾಗಿ ಹೇಳಿದ್ದಾರೆ.
“ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು. ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಹಾಗೂ ಅಮೆರಿಕದ ನೌಕಾಪಡೆಯ ನಿರ್ಬಂಧವನ್ನು ತಕ್ಷಣದಿಂದಲೇ ತೆಗೆದುಹಾಕಲು ನಾನು ಅನುಮತಿ ನೀಡಿದ್ದೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಚಾಲನೆ ಮಾಡಿ. ತೈಲ ಹರಿಯಲಿ,” ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಘೋಷಣೆಯಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡುವ ನಿರೀಕ್ಷೆ ವ್ಯಕ್ತವಾಗಿದ್ದು, ಹೋರ್ಮುಜ್ ಜಲಸಂಧಿ ಮೂಲಕ ಮತ್ತೆ ತೈಲ ಸಾಗಣೆ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಇದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು ಈ ಬೆಳವಣಿಗೆಯನ್ನು ಸ್ವಾಗತಿಸಿವೆ.


