17 June 2026 |

ಸೊಳ್ಳೆಯಷ್ಟು ಚಿಕ್ಕ ಡ್ರೋನ್ ನಿರ್ಮಿಸಿದ ಚೀನಾ: ರಹಸ್ಯ ಕಣ್ಗಾವಲುಗೆ ಹೊಸ ತಂತ್ರಜ್ಞಾನ

  • 16 Jun 2026 02:18:20 PM

ಬೀಜಿಂಗ್: ರಹಸ್ಯ ಕಣ್ಗಾವಲು ಮತ್ತು ಗುಪ್ತಚರ ಕಾರ್ಯಾಚರಣೆಗಳಿಗೆ ಬಳಸಬಹುದಾದ ಸೊಳ್ಳೆಯಷ್ಟು ಚಿಕ್ಕ ಡ್ರೋನ್‌ನ್ನು ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯ (NUDT) ಅಭಿವೃದ್ಧಿಪಡಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

 

ಈ ಸೂಕ್ಷ್ಮ ಮಾನವರಹಿತ ವೈಮಾನಿಕ ವಾಹನ (UAV) ಕೇವಲ 0.3 ಗ್ರಾಂಗಿಂತಲೂ ಕಡಿಮೆ ತೂಕ ಹೊಂದಿದ್ದು, ಅದರ ರೆಕ್ಕೆಗಳು ಸೆಕೆಂಡಿಗೆ ಸುಮಾರು 500 ಬಾರಿ ಬಡಿಯುತ್ತವೆ. ಇದರ ವಿನ್ಯಾಸ ಮತ್ತು ಚಲನೆ ನಿಜವಾದ ಸೊಳ್ಳೆಯನ್ನು ಹೋಲುವಂತಿರುವುದರಿಂದ ಸಾಮಾನ್ಯ ಜನರಿಗೆ ಅದನ್ನು ಗುರುತಿಸುವುದು ಕಷ್ಟವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

ಅತ್ಯಾಧುನಿಕ ಕಣ್ಗಾವಲು ಸಂವೇದಕಗಳು, ಮೈಕ್ರೋ ಕ್ಯಾಮೆರಾಗಳು ಹಾಗೂ ಸಂವಹನ ವ್ಯವಸ್ಥೆಗಳನ್ನು ಇದರ ಅತಿಸಣ್ಣ ದೇಹದೊಳಗೆ ಅಳವಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪರಿಣಾಮವಾಗಿ ಕಟ್ಟಡಗಳ ಒಳಭಾಗ, ಜನಸಂದಣಿ ಪ್ರದೇಶಗಳು ಹಾಗೂ ಸೂಕ್ಷ್ಮ ಭದ್ರತಾ ವಲಯಗಳಲ್ಲಿ ರಹಸ್ಯವಾಗಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಬಹುದಾಗಿದೆ.

 

ಈ ತಂತ್ರಜ್ಞಾನವು ಭದ್ರತೆ ಮತ್ತು ಗುಪ್ತಚರ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರವಾದರೂ, ದುರುಪಯೋಗದ ಬಗ್ಗೆ ಆತಂಕಗಳನ್ನೂ ಕೂಡ ಹುಟ್ಟುಹಾಕಿದೆ. ಇಂತಹ ಸೂಕ್ಷ್ಮ ಡ್ರೋನ್‌ಗಳ ಬಳಕೆಗೆ ಸಂಬಂಧಿಸಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಚರ್ಚೆಗಳು ಆರಂಭವಾಗಿವೆ.