01 July 2026 |

ಯೂರೋಪ್‌ನಲ್ಲಿ ಬಿಸಿಗಾಳಿ ಭೀಕರ ಅಬ್ಬರ: ವಾರದಲ್ಲೇ 1,300ಕ್ಕೂ ಹೆಚ್ಚು ಸಾವು, WHO ಹೈ ಅಲರ್ಟ್

  • 30 Jun 2026 12:26:42 PM

ನವದೆಹಲಿ: ಯೂರೋಪ್‌ನಲ್ಲಿ ಕಳೆದ ಒಂದು ವಾರದಿಂದ ತೀವ್ರ ಬಿಸಿಗಾಳಿ ಅಬ್ಬರ ಮುಂದುವರಿದಿದ್ದು, ಇದರಿಂದ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆಯೂ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

 

ಜೂನ್ 21ರಿಂದ ಜೂನ್ 28ರವರೆಗೆ ದಾಖಲಾಗಿರುವ ಈ ಸಾವಿನ ಪ್ರಕರಣಗಳು ಯೂರೋಪ್‌ನಲ್ಲಿ ಈವರೆಗಿನ ಅತ್ಯಂತ ತೀವ್ರ ಶಾಖದ ಅಲೆಯ ಪರಿಣಾಮ ಎಂದು WHO ತಿಳಿಸಿದೆ. ಈ ವರ್ಷದ ಅತ್ಯಂತ ತೀವ್ರ ಶಾಖದ ಅಲೆಯಾಗಿ ಪರಿಣಮಿಸಿರುವ ಬಿಸಿಗಾಳಿ ಹಲವು ರಾಷ್ಟ್ರಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

 

ಜರ್ಮನಿ, ಪೋಲೆಂಡ್, ಜೆಕ್ ಗಣರಾಜ್ಯ ಮತ್ತು ಹಂಗೇರಿ ಸೇರಿದಂತೆ ಹಲವು ದೇಶಗಳಲ್ಲಿ ದಾಖಲೆಯ ಮಟ್ಟದ ತಾಪಮಾನ ದಾಖಲಾಗಿದೆ. ಜರ್ಮನಿಯ ಕೆಲವು ಭಾಗಗಳಲ್ಲಿ ಉಷ್ಣಾಂಶವು 41 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕವಾಗಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

 

ಮಕ್ಕಳು, ವೃದ್ಧರು ಹಾಗೂ ಆರೋಗ್ಯ ಸಮಸ್ಯೆ ಹೊಂದಿರುವವರು ಅನಗತ್ಯವಾಗಿ ಹೊರಗಡೆ ಹೋಗದಂತೆ ಮತ್ತು ಸಾಕಷ್ಟು ನೀರು ಕುಡಿಯುವಂತೆ WHO ಸಲಹೆ ನೀಡಿದೆ.