Bantwal : ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.), ಕಡೇಶಿವಾಲಯ - 8 ನೇ ವಾರ್ಷಿಕ ಸಮಾರೋಪ
"ಸೇವೆ ಎಂಬ ಯಜ್ಞದಲ್ಲಿ ಸವಿದೆಯಂತೆ ಉರಿಯುವ" ಎನ್ನುವ ಧ್ಯೇಯಯನ್ನು ಉಸಿರಾಗಿಸಿಕೊಂಡು, "ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ" ಇದನ್ನು ಜೀವನದ ತತ್ವ ವಾಕ್ಯವಾಗಿಸಿಕೊಂಡು ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆ- ಬಿರುವೆರ್ ಕಡೇಶಿವಾಲಯ. ಈ ಬಿರುವೆರ್ ಕಡೇಶಿವಾಲಯದ 8 ನೇ ವಾರ್ಷಿಕ ಪದಗ್ರಹಣ ಇದೇ ಫೆಬ್ರವರಿ 2, 2025 ರಂದು ಅದ್ದೂರಿಯಾಗಿ ಕಡೇಶಿವಾಲಯದ ಪೆರ್ಲಾಪು ಸರಕಾರಿ ಶಾಲಾ ವಠಾರದಲ್ಲಿ ನಡೆಯಿತ್ತು.
ಬೆಳಗ್ಗೆ ಪುರೋಹಿತ ಅರುಣ್ ಶಾಂತಿಯವರ ನೇತೃತ್ವದಲ್ಲಿ ಗುರುಪೂಜಾ ಕಾರ್ಯಕ್ರಮ, ಬಳಿಕ ಅತಿಥಿಗಳ ಬರಮಾಡಿಕೊಳ್ಳುವಿಕೆ ಹಾಗೂ ಸಭಾ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡಲಾಯಿತು. ಅಥಿತಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವುದರ ಮೂಲಕ ಸಭಾ ಕಾರ್ಯಕ್ರಮ ಆರಂಭಿಸಲಾಯಿತು.
ಗಣ್ಯಾತಿ ಗಣ್ಯರ ಹಾಗೂ ಊರ ಪರವೂರ ಹಿರಿಯರ, ಮಹಿಳೆಯರ, ಕಿರಿಯರ ಸಮ್ಮುಖದಲ್ಲಿ ನಡೆದ ಬಿರುವೆರ್ ಕಡೇಶಿವಾಲಯದ 8 ನೇ ವರುಷದ ವಾರ್ಷಿಕ ಸಮಾರೋಪ ಸಮಾರಂಭವಾಗಿತ್ತು. ಸಭಾ ಕಾರ್ಯಕ್ರಮದ ಜೊತೆಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಲ್ಲವ ಸಮಾಜದ ಗಣ್ಯರನ್ನು ಅಭಿನಂದಿಸಲಾಯಿತು.
ಕಂಗೊಳಿಸುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಮತ್ತು ತುಳು ಜಾನಪದ ವಿದ್ವಾಂಸರಿಗಿರುವ ಶ್ರೀ ಬನ್ನಂಜೆ ಬಾಬು ಅಮೀನ್, ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸರಕಾರಿ ಸಂಘದ ಅಧ್ಯಕ್ಷರು, ರಾಜಕೀಯ ಮುಖಂಡ ಶ್ರೀ ಕೆ.ಸಂಜೀವ ಪೂಜಾರಿ,ಕಡೇಶಿವಾಲಯ ಗ್ರಾಮದ ವಾಸಿಯಾಗಿರುವ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಧೆ ಇಸ್ರೋ ಬೆಂಗಳೂರು ಇದರ ಟೆಕ್ನಿಕಲ್ ಆಫೀಸರ್ ಆಗಿರುವ ಶ್ರೀ ಶರತ್ ಕುಮಾರ್ ಕಂಪದಕೋಡಿ, ಅರಣ್ಯ ಇಲಾಖೆಯ ಗಸ್ತು ಆಗಿರುವ ಶ್ರೀ ಹೇಮಂತ್ ಕುಮಾರ್ ಪಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಕೃತಿಕಾ ಕೊರತಿಗುರಿ ರವರುಗಳನ್ನು ಅಭಿನಂದಿಸಿ, ಶಾಲು ಹೊದಿಸಿ, ಪೇಟ ಧರಿಸಿ, ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು.
ಬಿರುವೆರ್ ಕಡೇಶಿವಾಲಯದ ಅಧ್ಯಕ್ಷರಾಗಿದ್ದ ವಿದ್ಯಾಧರ ಪೂಜಾರಿ ಪ್ರಾಸ್ತಾವಿಕ ವರದಿಯೊಂದಿಗೆ ಸ್ವಾಗತಿಸಿದರು. ಸಂಧ್ಯಾ ವಿದ್ಯಾದರ್, ಕಾವ್ಯ ಉಮೇಶ್, ಕೀರ್ತಿ ಸನ್ಮಾನ ಪಾತ್ರ ಓದುವ ಮೂಲಕ ಗಣ್ಯರನ್ನು ಗುರುತಿಸಿದರು. ಟ್ರಸ್ಟಿನ ಪ್ರಧಾನ ಸಂಚಾಲಕರಾಗಿರುವ ದಿನೇಶ್ ಪೂಜಾರಿ ಸುರ್ಲಾಜೆ ವಂದಿಸಿದರು ಮತ್ತುದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನಕ್ಕೆ ಪಾತ್ರರಾಗಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಬನ್ನಂಜೆ ಬಾಬು ಅಮೀನ್ ಅವರು ತಮ್ಮ ಪ್ರಧಾನ ಭಾಷಣದಲ್ಲಿ ಮಾತನಾಡಿ " ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿಯನ್ನು ಕಲಿಸಿಕೊಡಬೇಕಾಗಿದೆ, ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಶುರು ಆಗಬೇಕು " ಎಂದು ಉಪದೇಶ ಮಾಡಿದರು.
ಫ್ರೆಂಡ್ಸ್ ಸುರತ್ಕಲ್ ತುಳುನಾಡು ಬಿರುವೆರ್ ಸ್ಥಾಪಕ ಅಧ್ಯಕ್ಷರಾದ ಲೋಕೇಶ್ ಕೋಡಿಕೆರೆ, ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ವನಿತಾ ಕೃಷ್ಣಪ್ಪ ಪೂಜಾರಿ, ಟ್ರಸ್ಟಿನ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ಕಲ್ಲಾಜೆ, ಪ್ರಸ್ತುತ ಅಧ್ಯಕರಾಗಿದ್ದ ವಿದ್ಯಾಧರ ಪೂಜಾರಿ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯ ಮುಂಭಾಗದಲ್ಲಿ ಊರಿನ ಬಿಲ್ಲವ ಸಮಾಜದ ಎಲ್ಲಾ ಗಣ್ಯ ವ್ಯಕ್ತಿಗಳು, ಮಹಿಳೆಯರು, ಮಕ್ಕಳು ಉಪಸ್ಥಿತಿ ಎದ್ದು ಕಾಣುತಿತ್ತು.
ಪ್ರತಿವರ್ಷದಂತೆ ಈ ವರ್ಷವೂ ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿದ ಎಸ್ ಎಸ್ ಎಲ್ ಸಿ , ಪಿ ಯು ಸಿ ಹಾಗೂ ಪದವಿ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.ಬಿರುವೆರ್ ಕಡೇಶಿವಾಲಯ ಸಂಸ್ಥೆ ಬಡ ಮಕ್ಕಳನ್ನು ದತ್ತು ಪಡೆದು ಆ ಮಕ್ಕಳಿಗೆ ಸಹಾಯಧನ ಕೆಲ ವರುಷಗಳಿಂದ ಮಾಡುತ್ತಲೇ ಬರುತಿದೆ. ಅದೇ ರೀತಿ ಈ ಬಾರಿಯೂ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಮುಂದಕ್ಕೆ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಮನರಂಜನೆಗಳು ಜರಗಿತು. ಶಿಕ್ಷಕಿ ಸಂಧ್ಯಾ ವಿದ್ಯಾಧರ ಪೂಜಾರಿ ಮತ್ತು ತಂಡ ಪ್ರದರ್ಶಿದ ಕೋಟಿ ಚೆನ್ನಯ ನೃತ್ಯ ನೆರವೇರಿದ ಜನರ ಮನಸೆಳೆಯಿತು. ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.), ಕಡೇಶಿವಾಲಯದ ನೂತನ ಅಧ್ಯಕ್ಷರಾಗಿ ಯಶವಂತ್ ಸಾಲ್ಯಾನ್ ಪತ್ತೊಡಿಂಗೆ ನೇಮಕವಾಗುವುದರ ಮೂಲಕ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವು ನೆರವೇರಿಸಲಾಯಿತು.
ಬಿರುವೆರ್ ಕಡೇಶಿವಾಲಯ ಸಂಘಟನೆ ಕಳೆದ 8 ವರುಷಗಳಿಂದ ಸತತವಾಗಿ ಬಿಲ್ಲವ ಸಮಾಜಕ್ಕೆ ಆಸರೆಯಾಗಿ ನಿಂತಿದೆ. ಕಡೇಶಿವಾಲಯದ ಬಿಲ್ಲವ ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ, ಅವರ ಕಣ್ಣೀರು ಒರೆಸುವ ಮಹಾನ್ ಕೆಲಸ ಈ ಸಂಘಟನೆ ಮಾಡುತ್ತಲೇ ಬರುತ್ತಿದೆ.
ಮನೆ ಕಟ್ಟಲು ನೆರವಾಗುಹುದು, ಬಡ ಮಕ್ಕಳಿಗೆ ವಿದ್ಯಾಭಾಸಕ್ಕೆ ನೆರವು, ಪ್ರತಿ ವರುಷ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಗುರುತಿಸಿ ಸ್ಕಾಲರ್ಷಿಪ್ ( ವಿದ್ಯಾರ್ಥಿ ವೇತನ ) ಕೊಡುಹುದು, ಅನಾರೋಗ್ಯ ವ್ಯಕ್ತಿಗಳಿಗೆ ನೆರವಾಗುಹುದು ಈ ರೀತಿಯ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿರುವ ಸಂಸ್ಥೆಯಾಗಿದೆ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ.), ಕಡೇಶಿವಾಲಯ.
ಸಂಪೂರ್ಣ ಸಮಾಜಕ್ಕೆ ನಮ್ಮಿಂದ ನೆರವು ಕೊಡಲು ಸಾಧ್ಯವಾಗದೆ ಇರುವುದರಿಂದ ಕನಿಷ್ಠ ಪಕ್ಷ ನಮ್ಮ ಸಮಾಜದ ಜನರಿಗೆ ಆದರೂ ನೆರವು ಆಗುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇವೆ, ಮುಂದಕ್ಕೆ ಸಾಮರ್ಥ್ಯವಾದರೆ ಎಲ್ಲಾ ಸಮಾಜಕ್ಕೂ ನಮ್ಮಿಂದಾಗುವಷ್ಟು ನೆರವು ನೀಡಿ ಸಮಾಜ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುತೇವೆ ಎಂದು ಈ ಸಂಘಟನೆಯಲ್ಲಿ ತೊಡಗಿಸಿಕೊಂಡವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.