ಬಂಟ್ವಾಳ: ಗುರುಗಳು ಸಮಾಜದ ದೀಪಗಳು ಅವರಿಂದಲೇ ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳ ಬೆಳಕು ಹರಡುತ್ತದೆ. ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅತಿ ಮಹತ್ತರ. ಗುರುಗಳು ಕೇವಲ ಪಾಠ ಬೋಧಕರು ಮಾತ್ರವಲ್ಲ, ಅವರು ಜೀವನದ ನಿಜವಾದ ಮಾರ್ಗದರ್ಶಕರು.
ಮೌಲ್ಯಗಳು ಜೀವಂತವಾಗಿರುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರ, ವಿದ್ಯಾರ್ಥಿಗಳು ಗುರುಗಳ ಸಲಹೆಗಳನ್ನು ಮನಸ್ಸಿನಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು. ಶಿಕ್ಷಣದ ಅರ್ಥ ಅಂಕಗಳಲ್ಲ, ಅದು ಮಾನವೀಯತೆಯ ಬೆಳವಣಿಯ ರಹದಾರಿ, ಬಿಲ್ಲವ ಸಂಘದ ಶಿಸ್ತು ಬದ್ದ ಆಯೋಜನೆ ಮತ್ತು ಹೃದಯಸ್ಪರ್ಶಿ ಸ್ವಾಗತ ಸಮಾರಂಭವನ್ನು ಸ್ಮರಣೀಯವಾಗಿಸಿದೆ ಎಂದು ಮಂಗಳೂರಿನ ಡಯಟ್ ಸೆಂಟರ್‌ನ ಹಿರಿಯ ಉಪನ್ಯಾಸಕರಾದ ಡಾ. ತ್ರಿವೇಣಿ ತಿಳಿಸಿದರು.
ಅವರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನವೆಂಬರ್ 9 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ 'ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ' ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳ ತಾಲೂಕಿನ ಬಿಲ್ಲವ ಸಮುದಾಯದ ಸರಕಾರಿ ಹಾಗೂ ಸರಕಾರೇತರ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ವಿಭಾಗದ ಒಟ್ಟು 195 ಬೋಧಕ-ಬೋಧಕಿಯರಿಗೆ "ಬಿಲ್ಲವ ಗುರುವಂದನಾ ಗೌರವಾಭಿನಂದನೆ" ಹಾಗೂ ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದ ಸಾಧಕ 10 ಗುರುಗಳಿಗೆ " ಬಿಲ್ಲವ ಗುರುವಂದನಾ ಪುರಸ್ಕಾರ " ಪ್ರದಾನ ಮಾಡಲಾಯಿತು.
BERD ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ್ ಸಾಲ್ಯಾನ್, ಮೂತ್ರ ರೋಗ ತಜ್ಞರಾದ ಡಾ. ಸದಾನಂದ ಪೂಜಾರಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ ಪೂಜಾರಿ, ಉದ್ಯಮಿ ಓಂಪ್ರಸಾದ್ ಬಾರ್ದಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜನವರ 25ರಂದು ನಡೆಯುವ ಕೋಟಿ ಚೆನ್ನಯ ಕ್ರೀಡೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು, ಕ್ರೀಡಾಕೂಟದ ಸಂಚಾಲಕರಾದ ಬೇಬಿ ಕುಂದರ್ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿ ಸುನೀಲ್ ಎನ್ ಕುಂದರ್, ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ಶಂಬೂರು, ಆಂತರಿಕ ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಜೆ ಎಸ್ ಸ್ವಾಗತಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.





