ಶ್ರೀ ಮಣಿಕಂಠ ಮಂದಿರ ಕಲ್ಲುರ್ಟಿ ಸಾನಿಧ್ಯ ಕುದ್ರೆಬೆಟ್ಟು ಮೊದಲ ಹರಕೆಯ ಕೋಲ ಸೇವೆಗೆ ಮುಹೂರ್ತ

  • 24 Feb 2025 09:23:19 PM

ಕಲ್ಲಡ್ಕ ಕುದ್ರೆಬೆಟ್ಟು, ಫೆ.24 : ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮದ, ಕಲ್ಲಡ್ಕ ಹತ್ತಿರದ ಕುದ್ರೆಬೆಟ್ಟು ಕಲ್ಲುರ್ಟಿ ದೈವ ತುಳುನಾಡಿನ ಪ್ರಾಚೀನ ಮತ್ತು ಶಕ್ತಿಯುತ ಪರಿವಾರ ದೈವಗಳಲ್ಲಿ ಒಂದು. ಇದು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕುದ್ರೆಬೆಟ್ಟು ಎಂಬಲ್ಲಿ ಆರಾಧನೆಗೆ ಪ್ರಸಿದ್ಧವಾಗಿದೆ. ಕಲ್ಲುರ್ಟಿ ದೈವವು ತುಳುನಾಡಿನ ಪ್ರಖ್ಯಾತ ಪರಿವಾರ ದೈವಗಳಲ್ಲಿ ಒಂದಾಗಿದೆ. ಇದು ಶಕ್ತಿ ಮತ್ತು ನ್ಯಾಯದ ಪ್ರತಿಕೃತಿ ಎಂದು ಭಕ್ತರು ಭಾವಿಸುತ್ತಾರೆ.

 

ಈ ದೈವಸ್ಥಾನದ ಜೀರ್ಣೋದ್ಧಾರದ ನಂತರ ಪ್ರತಿ ಸಂಕ್ರಮಣಕ್ಕೆ ಕಲ್ಲುರ್ಟಿ ಅಮ್ಮನಿಗೆ ಅಗೆಲು ಸೇವೆಗಳು ನೆರವೇರುತ್ತಿವೆ. ಅದರಲ್ಲೂ ಪರವೂರ ಭಕ್ತಾದಿಗಳ ಸೇವೆ ಹೆಚ್ಚಾಗಿ ಬರುತ್ತಿರುವುದು ಶ್ರೀ ಕ್ಷೇತ್ರದ ಮಹಾತ್ಮೆಯನ್ನು  ತಿಳಿಸುತ್ತದೆ. ಇದರ ಜೊತೆಗೆ ಸಾನಿಧ್ಯದ ಶ್ರೀ ಮಣಿಕಂಠ ಮಂದಿರದಲ್ಲಿ ಪ್ರತಿ ವಾರ ಭಜನಾ ಕಾರ್ಯಕ್ರಮ ಕೂಡ ನಡೆಯುತ್ತದೆ. ಈ ಭಾಗದ ಅನೇಕ ಭಕ್ತರು ತಾಯಿಯ ಅನುಗ್ರಹದಿಂದ ಬಹಳಷ್ಟು ಯಶಸ್ಸನ್ನು ಕಂಡಿರುತ್ತಾರೆ. ತಾಯಿಯ ಮಹಾತ್ಮೆಯನ್ನು ಕಣ್ಣಾರೆ ಅನುಭವಿಸಿದ ಹಲವಾರು ಉದಾಹರಣೆಗಳಿವೆ. 

 

ಶ್ರೀ ಜನಶಕ್ತಿ ಸೇವಾ ಟ್ರಸ್ಟ್ (ರಿ.), ಶ್ರೀ ಮಣಿಕಂಠ ಯುವಶಕ್ತಿ (ರಿ.) ಮತ್ತು ಶ್ರೀ ಮಣಿಕಂಠ ಮಾತೃಶಕ್ತಿ (ರಿ.) ಕುದ್ರೆಬೆಟ್ಟು ಈ ಮೂರೂ ಸಂಘಟನೆಗಳು ಮಂದಿರದ ಕಮಿಟಿಯಲ್ಲಿದ್ದು ಇವರುಗಳ ಹಗಲು ರಾತ್ರಿ ಶ್ರಮದಿಂದ ಮತ್ತು ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಕಲ್ಲುರ್ಟಿ ದೈವಸ್ಥಾನ ಎದ್ದು ನಿಂತಿತ್ತು. 

 

 

ಇದೇ ಬರುವ ತಾರೀಕು 02 ನೇ ಮಾರ್ಚ್ 2025 ರಂದು ರಾತ್ರಿ 7.00 ಗಂಟೆಗೆ ಸರಿಯಾಗಿ ಮೊದಲ ಹರಕೆಯ ಕೋಲ ಸೇವೆ ಶ್ರೀಕ್ಷೇತ್ರದಲ್ಲಿ ನಡೆಯಲಿದೆ. ಈ ಕ್ಷೇತ್ರದ ಸಮರ್ಪಿತ ಭಕ್ತರಾಗಿರುವ ಸಂತೋಷ್ ಕುಮಾರ್ ಬೊಲ್ಪೋಡಿ ಯವರಿಗೆ ತನ್ನ ಮೊದಲ ಸೇವೆ ಕೊಡುವ ಭಾಗ್ಯ ದೊರಕಿದೆ. ಇವರು ಮಣಿಕಂಠ ಯುವಶಕ್ತಿಯ ಮಾಜಿ ಅಧ್ಯಕ್ಷರಾಗಿದ್ದರು.

 

ಶ್ರೀ ಮಣಿಕಂಠ ಯುವಶಕ್ತಿ ಸಕ್ರಿಯ ಕಾರ್ಯಕರ್ತರಾಗಿರುವ ಇವರು ತನ್ನ ಬೈಕ್ ಕಳೆದು ಹೋದ ಸಂದರ್ಭದಲ್ಲಿ ಕುದ್ರೆಬೆಟ್ಟುವಿನಲ್ಲಿ ನೆಲೆಸಿರುವ ಶ್ರೀ ಕಲ್ಲುರ್ಟಿ ಅಮ್ಮನಿಗೆ ಪ್ರಾರ್ಥನೆ ಮಾಡಿದ ನಂತರ, ಕಳೆದು ಹೋದ ಬೈಕ್ ಬೆಂಗಳೂರುನಲ್ಲಿ ಪತ್ತೆಯಾಗಿ ಅವರ ಕೈಗೆ ಸೇರಿದ ಘಟನೆಯನ್ನು ನೆನೆಸಿ ಭಾವುಕರಾಗುತ್ತಾರೆ. 

 

ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು (ರಿ.) ಮತ್ತು ಇದರ ಇತರ ಸಂಘ ಸಂಸ್ಥೆಗಳು ಊರ ಮತ್ತು ಪರವೂರ ದಾನಿಗಳ ನೆರವಿನಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಬಂದಿವೆ. ಬಡ ಕುಟುಂಬಗಳಿಗೆ ಮನೆ ಕಟ್ಟಲು ಶ್ರಮದಾನ, ಅನಾರೋಗ್ಯದಿಂದ ಬಳಲುವ ವ್ಯಕ್ತಿಗಳಿಗೆ ನೆರವು, ಅರೋಗ್ಯದ ಬಗ್ಗೆ ಜನರಿಗೆ ಮಾಹಿತಿ, ವಿದ್ಯಾರ್ಥಿಗಳಿಗೆ ನೆರವು, ಕೋವಿಡ್ ಸಂದರ್ಭದಲ್ಲಿ ಕಿಟ್ ಹಂಚುವ ಮೂಲಕ ಅನೇಕ ಕುಟುಂಬಗಳ ಕಣ್ಣೀರು ಒರಸಿದ ಕೀರ್ತಿ ಈ ಸಂಘಟನೆಗಿದೆ. ಈ ರೀತಿಯಾಗಿ, ವರ್ಷಾಂತರ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿವೆ ಈ ಸಂಘಟನೆ.