105 ವರುಷಗಳ ನಂತರ ಪೊಳಲಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಿಯ ಸಾನಿಧ್ಯದಲ್ಲಿ ಶತಚಂಡಿಕಾ ಯಾಗ - ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ

  • 01 Mar 2025 01:42:49 PM

ಪೊಳಲಿ, ಮಾ. 01 : ಬಂಟ್ವಾಳ ತಾಲೂಕಿನ ಪೊಳಲಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಿಯ ಸಾನಿಧ್ಯದಲ್ಲಿ ಶತಚಂಡಿಕಾ ಯಾಗ ಮಾರ್ಚ್ 1 ರಿಂದ ಮಾರ್ಚ್ 7, 2025 ರವರೆಗೆ ನಡೆಯಲಿದೆ. ಇತಿಹಾಸ ಮತ್ತು ದಾಖಲೆಗಳ ಪ್ರಕಾರ 105 ವರುಷಗಳ ನಂತರ ಈ ಒಂದು ವಿಶೇಷವಾದ ಶತಚಂಡಿಕಾಯಾಗ ಈ ಕ್ಷೇತ್ರದಲ್ಲಿ ನಡೆಯಲಿರುವುದು. 1920 ನೇ ಇಸವಿಯಲ್ಲಿ ಈ ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆದಿತ್ತು ಎನ್ನುವ ಕೆಲ ಪುರಾವೆಗಳು ಲಭಿಸಿದೆ. ದುರ್ಗಾ ಪರಿಮೇಶ್ವರಿ ದೇವಿ ಕ್ಷಿಪ್ತ ಫಲವನ್ನು ಕೊಡುವ ದೇವಿ. ಆದ್ದರಿಂದ ಲೋಕ ಹಿತಕ್ಕಾಗಿ ದೇವಿಯ ಆರಾಧನೆ ಯಜ್ಞ ಯಾಗಾದಿಗಳ ಮೂಲಕ ಮಾಡಿದರೆ ಇಡೀ ಲೋಕದ ಕಲ್ಯಾಣವಾಗಿ ಸುಖ ಶಾಂತಿ ನೆಮ್ಮದಿಯನ್ನು ಅಮ್ಮ ದೇವಿ ಕರುಣಿಸುತ್ತಾಳೆ ಎನ್ನುವ ಬಲವಾದ ನಂಬಿಕೆ ಭಕ್ತರಲ್ಲಿದೆ. 

 

ಬೆಳಿಗ್ಗೆ ಗಂಟೆ 8.00 ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ ಹೀಗೆ ಇನ್ನಿತರ ಪೂಜಾ ವಿಧಿವಿಧಾನಗಳು ನೆರವೇರಲಿದ್ದು, ಸಂಜೆ 5.00 ರಿಂದ ಹೊರೆಕಾಣಿಕೆ ಸ್ವೀಕಾರ ಮಾಡಲಾಗುವುದು. ಶ್ರೀ ರಾಜರಾಜೇಶ್ವರಿ ಅಮ್ಮನ ಸಾನಿಧ್ಯದಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ದಿವಸ ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಉಪಹಾರ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.

 

ಹಾಗಾದರೆ, ಈ ಶತಚಂಡಿಕಾಯಾಗ ಅಂದರೆ ಏನು ? ಯಾವೆಲ್ಲಾ ದೇವಿಗಳನ್ನು ಆರಾಧಿಸುತ್ತಾರೆ ಮತ್ತು ಹೇಗೆ ? ಚಂಡಿಕಾ ಯಾಗ ಯಾವಾಗ ಮಾಡಬೇಕು, ಯಾರೆಲ್ಲಾ ಮಾಡಿದರೆ ಉತ್ತಮ ಮತ್ತು ಅದರಿಂದಾಗುವ ಪ್ರಯೋಜನವೇನು ಬನ್ನಿ ತಿಳಿಯೋಣ.

 

ಶತ ಚಂಡಿಕಾಯಾಗ ಅಂದರೆ ಏನು ?
ಸಾಮಾನ್ಯವಾಗಿ ಶತ ಪದವನ್ನು ಕೇಳಿದ ತಕ್ಷಣ ನೂರು ಚಂಡಿಕಾ ಯಾಗ ಮಾಡಬೇಕೆಂದು ನಮಗೆ ಅನಿಸುತ್ತದೆ. ಆದರೆ, ನೂರು ಪಾರಾಯಗಳನ್ನು ಮಾಡಿ, ಅದರ ದಶಾಂಶ ಹೋಮವನ್ನು ಮಾಡುವುದಕ್ಕೆ ಶತ ಚಂಡಿಕಾಯಾಗ ಎನ್ನುತ್ತಾರೆ. ದುರ್ಗಾ ಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರ ರೂಪವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ ಎನ್ನುತ್ತಾರೆ. 

 

ಯಾವೆಲ್ಲ ದೇವಿಗಳನ್ನು ಈ ಯಾಗದಲ್ಲಿ ಆರಾಧಿಸುತ್ತಾರೆ ?
ಚಂಡಿಕಾ ಯಾಗದ ಮೂಲಕ ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾದುರ್ಗೆಯನ್ನು ಸ್ತೋತ್ರ ಭಾಗವಾಗಿ ಆರಾಧಿಸಲಾಗುತ್ತದೆ. ಚಂಡಿಕಾ ದೇವಿಯು ಮಹಿಷಾಶುರಾ, ಶುಂಭ, ನಿಶುಂಭ, ಚಂಡ, ಮುಂಡ, ರಕ್ತಬೀಜಾಸುರ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ವಧಿಸುತ್ತಾಳೆ ಆ ಮೂಲಕ ಲೋಕದ ಕಲ್ಯಾಣವನ್ನು ಈ ದೇವಿ ಮಾಡುತ್ತಾಳೆ. ಸಣ್ಣ ಪ್ರಮಾಣದಲ್ಲಿ ಮಾಡುವ ಆರಾಧನೆಯನ್ನು ಹೋಮ, ಹವನ ಎಂದು ಕರೆದರೆ, ಅದರ ಪ್ರಮಾಣ ಜಾಸ್ತಿಯಾದಾಗ ಯಜ್ಞ, ಯಾಗ ಎಂದು ಹೇಳಿ ಗೌರವಾರ್ಥವಾಗಿ ಕರೆಯುವುದು. 

 

ಚಂಡಿಕಾಯಾಗ ಯಾವಾಗ ಮಾಡಬೇಕು ?
ಚಂಡಿಕಾಯಾಗ ಶುಭ ದಿನಗಳಲ್ಲಿ ಮಾಡಬೇಕಾಗುತ್ತದೆ. ನವರಾತ್ರಿ, ಅಷ್ಟಮಿ, ಮಾಘ ಅಮಾವಾಸ್ಯೆ, ಜೇಷ್ಠ ಅಮಾವಾಸ್ಯೆ, ನವಮಿ, ಚತುರ್ದಶಿ, ಚೈತ್ರ , ಕಾರ್ತಿಕ ಪೌರ್ಣಮಿ ಈ ಎಲ್ಲಾ ದಿನಗಳು ಚಂಡಿಕಾಯಾಗ ನೆರವೇರಿಸಲು ಶ್ರೇಷ್ಠ ದಿನಗಳಾಗಿರುತ್ತದೆ.

 

ಚಂಡಿಕಾಯಾಗ ಮಾಡುವುದರಿಂದ ಭಕ್ತರು ಪಡೆಯುವ ಪ್ರಯೋಜನ :
ನಕಾರಾತ್ಮಕ ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆಗಳು ವೃದ್ಧಿಸುತ್ತದೆ. ಮನಶಾಂತಿ, ಅಭಿವೃದ್ಧಿ, ಶಾಪ ಪರಿಹಾರ, ಎಲ್ಲಾ ಬಗೆಯ ಸಂಕಷ್ಟಗಳು ನಿವಾರಣೆಗೊಂಡು ಉತ್ತಮ ಸಂಪತ್ತು, ಅರೋಗ್ಯ, ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಶತ್ರುಭಯ, ಕಾರ್ಯಸಿದ್ಧಿಯಾಗುವುದರ ಮೂಲಕ ಪ್ರತಿ ಆಯಾಮದಲ್ಲೂ ಉತ್ತರೋತ್ತರ ಅಭಿವೃದ್ಧಿಯಾಗಲಿದೆ. 

 

ಯಾವ ಜನರು ಈ ಯಾಗವನ್ನು ಮಾಡಬಹುದು ?
ದುಷ್ಟ ಪೀಡೆ, ಅನಿಷ್ಟ ಗ್ರಹದೋಷಗಳ ಕಾಟ ಇರುವವರು, ಕೌಟಂಬಿಕ ಸಮಸ್ಯೆಯಲ್ಲಿರುವವರು, ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಅನುಭವಿಸುವವರು, ಮಾಂತ್ರಿಕ ಶಕ್ತಿಯ ಪ್ರಭಾವಕ್ಕೆ ಒಳಗಾದವರು, ಮೃತ್ಯು ಭಯ, ಜೀವ ಭಯ, ಶತ್ರು ಭಾದೆ ಅಥವಾ ಯಾವುದೇ ರೀತಿಯ ತಾಪತ್ರೆ ಇರುವವರು ಚಂಡಿಕಾಯಾಗ ಮಾಡಿ ದೇವಿಯ ಕೃಪೆಗೆ ಪಾತ್ರರಾಗಬಹುದು.