ಕಲ್ಲಡ್ಕ: ಸುಮಾರು ಸಾವಿರ ವರ್ಷಗಳ ಕಾಲ ಸಾರ್ವಜನಿಕರ ದೃಷ್ಟಿಯಿಂದ ದೂರವಾಗಿದ್ದರೆಂದು ನಂಬಲಾಗುವ ಶ್ರೀ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ದರ್ಶನ, ರುದ್ರಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮವು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಮಧುಕರ ಸಭಾಂಗಣದಲ್ಲಿ ಜುಲೈ 14ರಂದು ನಡೆಯಲಿದೆ. ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಅಪರಾಹ್ನ 3.30ರಿಂದ ಸಂಜೆ 7.30ರವರೆಗೆ ನಡೆಯಲಿದೆ.
ಶ್ರೀ ಸೋಮನಾಥ ಜ್ಯೋತಿರ್ಲಿಂಗದ ಹಿನ್ನೆಲೆ
ಶಿವಪುರಾಣದ ಉಲ್ಲೇಖಗಳ ಪ್ರಕಾರ, ಚಂದ್ರದೇವರು ಭಗವಾನ್ ಶಿವನ ಮೇಲಿನ ತಮ್ಮ ಭಕ್ತಿ ಮತ್ತು ಗೌರವದ ಸಂಕೇತವಾಗಿ ಸೋಮನಾಥ ದೇವಾಲಯವನ್ನು ನಿರ್ಮಿಸಿ ಸಮರ್ಪಿಸಿದ್ದರು. ಅಲ್ಲಿ ಪ್ರತಿಷ್ಠಾಪಿತವಾಗಿದ್ದ ಸುಮಾರು ಮೂರು ಅಡಿ ಎತ್ತರದ ಶಿವಲಿಂಗವು ನೆಲದಿಂದ ಸುಮಾರು ಎರಡು ಅಡಿ ಎತ್ತರದಲ್ಲಿ ತೇಲುತ್ತಿದ್ದ ವಿಶಿಷ್ಟತೆಯನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ. ವಿಜ್ಞಾನಿಗಳ ಅಭಿಪ್ರಾಯದಂತೆ, ಅದರಲ್ಲಿದ್ದ ಕಾಂತೀಯ ಗುಣಲಕ್ಷಣಗಳಿಂದ ಈ ರೀತಿಯ ಸ್ಥಿತಿ ಸಾಧ್ಯವಾಗಿರಬಹುದು ಎನ್ನಲಾಗಿದೆ.
ಇತಿಹಾಸದ ಪ್ರಕಾರ, ಸುಮಾರು ಸಾವಿರ ವರ್ಷಗಳ ಹಿಂದೆ ಘಜನಿಯ ಮೊಹಮ್ಮದ್ ಸೋಮನಾಥ ದೇವಾಲಯದ ಮೇಲೆ 17 ಬಾರಿ ದಾಳಿ ನಡೆಸಿದ ಪರಿಣಾಮ ದೇವಾಲಯ ಮತ್ತು ಜ್ಯೋತಿರ್ಲಿಂಗವು ತೀವ್ರ ಹಾನಿಗೊಳಗಾಯಿತು. ಆ ಸಂದರ್ಭದಲ್ಲಿ ಒಡೆದು ಚದುರಿದ ಜ್ಯೋತಿರ್ಲಿಂಗದ ಪ್ರಮುಖ ತುಣುಕುಗಳನ್ನು ಕೆಲ ಹಿಂದೂ ಭಕ್ತರು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಬಂದಿದ್ದಾರೆ ಎಂಬ ನಂಬಿಕೆಯೂ ಇದೆ.
ಅಗ್ನಿಹೋತ್ರಿ ವಂಶಕ್ಕೆ ಸೇರಿದ ಶಾಸ್ತ್ರಿ ಕುಟುಂಬವು ಈ ಪವಿತ್ರ ಶಿಲಾ ತುಣುಕುಗಳನ್ನು ಲಿಂಗದ ರೂಪಕ್ಕೆ ಮರುರೂಪಿಸಿ ಹಲವು ವರ್ಷಗಳ ಕಾಲ ಪೂಜಾ ಕೈಂಕರ್ಯ ನಡೆಸುತ್ತಾ ಸಂರಕ್ಷಣೆ ಮಾಡಿದೆ ಎಂದು ಹೇಳಲಾಗುತ್ತದೆ. ಬಳಿಕ 1924ರಲ್ಲಿ ಈ ಲಿಂಗವನ್ನು ಕಂಚಿ ಪೀಠದ ಶ್ರೀಗಳ ದರ್ಶನಕ್ಕೆ ಕೊಂಡೊಯ್ಯಲಾಯಿತು. ಅದರ ವೈಶಿಷ್ಟ್ಯವನ್ನು ಗಮನಿಸಿದ ಅವರು, ಪ್ರತಿಷ್ಠಾಪನೆಗೆ ಇನ್ನೂ ನೂರು ವರ್ಷಗಳ ಕಾಲ ಕಾಯಬೇಕು ಹಾಗೂ ಆ ಅವಧಿಯವರೆಗೆ ಇದೇ ಕುಟುಂಬದವರು ಗುಪ್ತವಾಗಿ ಪೂಜೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದ್ದರೆಂದು ತಿಳಿದುಬಂದಿದೆ.
ನಂತರ ಶಾಸ್ತ್ರಿ ಕುಟುಂಬದ ಇತ್ತೀಚಿನ ವಾರಸುದಾರರಾದ ಶ್ರೀ ಸೀತಾರಾಮ ಶಾಸ್ತ್ರಿಯವರು ಪ್ರಸ್ತುತ ಕಂಚಿ ಶ್ರೀಗಳನ್ನು ಸಂಪರ್ಕಿಸಿದಾಗ, ಈ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಲಾಯಿತು ಎನ್ನಲಾಗಿದೆ.
ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರ ಮಾರ್ಗದರ್ಶನದಲ್ಲಿ ದೇಶದ ವಿವಿಧ ಭಾಗಗಳ ಭಕ್ತರಿಗೆ ಈ ಜ್ಯೋತಿರ್ಲಿಂಗದ ದರ್ಶನದ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಇದೀಗ ಕಲ್ಲಡ್ಕದಲ್ಲಿಯೂ ಈ ಅಪರೂಪದ ದರ್ಶನದ ಅವಕಾಶ ಲಭಿಸಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸೋಮನಾಥೇಶ್ವರನ ಕೃಪೆಗೆ ಪಾತ್ರರಾಗುವಂತೆ ಆಹ್ವಾನಿಸಲಾಗಿದೆ.





