ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಅಕ್ಟೋಬರ್ 18 ಮತ್ತು 19ರಂದು ನಡೆಯಲಿರುವ ತುಳುನಾಡಿನ ಸಾಂಪ್ರದಾಯಿಕ ವೀರಕ್ರೀಡೆ ಕಂಬಳ ಆಯೋಜನೆ ಕುರಿತು ಪ್ರಥಮ ಹಂತದ ಪೂರ್ವಭಾವಿ ಸಭೆ ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಬೆಂಗಳೂರು ಕಂಬಳದ ಅಧ್ಯಕ್ಷರೂ, ಶಾಸಕರೂ ಆದ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ಕಂಬಳ ಸ್ಪರ್ಧೆಗೆ ಸೂಕ್ತ ಸ್ಥಳ ಗುರುತಿಸುವಿಕೆ, ಅಗತ್ಯ ಮೂಲಸೌಕರ್ಯಗಳು ಹಾಗೂ ಯಶಸ್ವಿ ಆಯೋಜನೆಗೆ ಕೈಗೊಳ್ಳಬೇಕಾದ ವಿವಿಧ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಮತ್ತು ಆಯೋಜಕರು ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್, ಮೈಸೂರು ಡಿಸಿಪಿ ಹರ್ಷಾ ಪ್ರಿಯಾಂವದ, ಕಂಬಳ ಭೀಷ್ಮ ಗುಣಪಾಲ್ ಕಡಂಬ, ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಬೆಂಗಳೂರು ಕಂಬಳ ಕಾರ್ಯಾಧ್ಯಕ್ಷ ಮುರಳೀಧರ್ ರೈ ಮಟಂತಬೆಟ್ಟು, ಹೊಕ್ಕಾಡಿಗೋಳಿ ಕಂಬಳ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲ್ ಗುತ್ತು, ಕಂಬಳ ಕರೆ ನಿರ್ಮಾಣದ ಜಾನ್ ಸಿರಿಲ್ ಡಿಸೋಜಾ, ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೈಸೂರಿನ ವಿವಿಧ ತುಳು ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.





