17 July 2026 |

ಬಿರುವೆರ್ ಕುಡ್ಲ ದುಬೈ ಘಟಕದಿಂದ ಮಾನವೀಯ ನೆರವು: ಎರಡು ಕುಟುಂಬಗಳಿಗೆ ₹1.65 ಲಕ್ಷ ವಿತರಣೆ

  • 16 Jul 2026 06:28:01 PM

ಮಂಗಳೂರು: ಸಮಾಜಸೇವಾ ಕಾರ್ಯಗಳ ಮೂಲಕ ಅಗತ್ಯವಿರುವ ಕುಟುಂಬಗಳಿಗೆ ನೆರವಾಗುತ್ತಿರುವ ಬಿರುವೆರ್ ಕುಡ್ಲ ಸಂಘಟನೆಯ ದುಬೈ ಘಟಕದ ಆಶ್ರಯದಲ್ಲಿ, ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ಎರಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಒಟ್ಟು ₹1.65 ಲಕ್ಷ ಆರ್ಥಿಕ ನೆರವು ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ₹55 ಸಾವಿರ ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದುರ್ಗಾಪ್ರಸಾದ್ ಅವರ ಚಿಕಿತ್ಸೆಗೆ ₹1.10 ಲಕ್ಷ ನೆರವನ್ನು ಸಂಘಟನೆಯ ಪದಾಧಿಕಾರಿಗಳು ಹಸ್ತಾಂತರಿಸಿದರು.

 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಬಿರುವೆರ್ ಕುಡ್ಲ ಸಂಘಟನೆಯು ಹಲವು ವರ್ಷಗಳಿಂದ ಜಾತಿ, ಧರ್ಮದ ಭೇದವಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ವಿದೇಶದಲ್ಲಿ ದುಡಿಯುತ್ತಿರುವ ಕನ್ನಡಿಗರು ತಮ್ಮ ತಾಯ್ನಾಡಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಂಘಟನೆಯ ಉದಯ ಪೂಜಾರಿ ಹಾಗೂ ಅವರ ತಂಡ ಸಮಾಜಮುಖಿ ಚಟುವಟಿಕೆಗಳ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ. ಈ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸಿದ ಅವರು, ಯುವಕರ ಇಂತಹ ಮಾನವೀಯ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ತಿಳಿಸಿದರು.