11 September 2026 |

ಜಕ್ರಿಬೆಟ್ಟಿನಲ್ಲಿ ಸೆ.14ರಿಂದ 18ರವರೆಗೆ ಅದ್ದೂರಿ ಗಣೇಶೋತ್ಸವ: 5 ದಿನಗಳ ವೈವಿಧ್ಯಮಯ ಕಾರ್ಯಕ್ರಮ

  • 11 Sep 2026 12:38:30 PM

ಬಂಟ್ವಾಳ: ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿಯ ನೇತೃತ್ವದಲ್ಲಿ 23ನೇ ವರ್ಷದ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14ರಿಂದ 18ರವರೆಗೆ ಜಕ್ರಿಬೆಟ್ಟು ಬೈಪಾಸ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

 

ಗಣೇಶೋತ್ಸವವನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸುವ ‘ಬಂಟ್ವಾಳದ ಹಬ್ಬ’ವಾಗಿ ಆಚರಿಸಲಾಗುತ್ತಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.

 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ಸೂಚನೆಗಳು ಹಾಗೂ ಕಾನೂನು ಸುವ್ಯವಸ್ಥೆಯ ನಿಯಮಗಳನ್ನು ಪಾಲಿಸಿಕೊಂಡು ಶಿಸ್ತಿನಿಂದ ಗಣೇಶೋತ್ಸವವನ್ನು ಆಯೋಜಿಸಲಾಗುವುದು ಎಂದರು.

 

ಸಾಮಾಜಿಕ ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಬಲಪಡಿಸುವ ಉದ್ದೇಶದಿಂದ ಆರಂಭಗೊಂಡಿರುವ ಈ ಗಣೇಶೋತ್ಸವ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆಯ ಉತ್ಸವವಾಗಿ ಬೆಳೆದಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನ ಹಾಗೂ ತುಳು ನಾಟಕಗಳು ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

 

ಸೆ.14: ಗಣೇಶ ವಿಗ್ರಹ ಪ್ರತಿಷ್ಠೆ

ಸೆಪ್ಟೆಂಬರ್ 14ರಂದು ಬೆಳಗ್ಗೆ 10 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬಳಿಕ ವೈದ್ಯ ಡಾ. ಶಿವಪ್ರಸಾದ್ ರೈ, ಮಂಗಳೂರು ಅವರು ಗಣೇಶೋತ್ಸವವನ್ನು ಉದ್ಘಾಟಿಸಲಿದ್ದು, ಸೊಲೂರು ಮಠದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

 

ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದ್ದು, ರಾತ್ರಿ 7 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ನಂತರ ‘ನೃತ್ಯ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

 

ಸೆ.15: ಯು.ಟಿ. ಖಾದರ್ ಅಧ್ಯಕ್ಷತೆ

ಸೆ.15ರಂದು ಬೆಳಗ್ಗೆ 9 ಗಂಟೆಯಿಂದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

 

ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

 

ಸೆ.16: ‘ಚಿ.ಸೌ. ಸುಮಂಗಲಾ’ ತುಳು ನಾಟಕ

ಸೆ.16ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮ ಹಾಗೂ ಭಜನೆ ನಡೆಯಲಿದೆ. ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

 

ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.

 

ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಅಮ್ಮ ಕಲಾವಿದರು ಕುಡ್ಲ ತಂಡದಿಂದ ‘ಚಿ.ಸೌ. ಸುಮಂಗಲಾ’ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

 

ಸೆ.17: ಯಕ್ಷಗಾನ ತಾಳಮದ್ದಳೆ, ತುಳು ನಾಟಕ

ಸೆ.17ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮ ಹಾಗೂ ಭಜನೆ ನಡೆಯಲಿದೆ. ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

 

ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾವೂರು ಆದಿಚುಂಚನಗಿರಿ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಲೊರೆಟ್ಟೊ ಚರ್ಚ್ ಧರ್ಮಗುರು ವಂ. ಜೇಮ್ಸ್ ಡಿಸೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

 

ಮಧ್ಯಾಹ್ನ 2 ಗಂಟೆಗೆ ‘ಜಾಂವತೀ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಲಕುಮಿ ತಂಡದಿಂದ ‘ಚಂದ್ರಾವತಿ’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

 

ಸೆ.18: ವೈಭವದ ಶೋಭಾಯಾತ್ರೆ

ಉತ್ಸವದ ಕೊನೆಯ ದಿನವಾದ ಸೆ.18ರಂದು ಬೆಳಗ್ಗೆ 9.30ರಿಂದ ವೈದಿಕ ಕಾರ್ಯಕ್ರಮಗಳು ಹಾಗೂ 10.30ರಿಂದ ಗಣಹೋಮ ನಡೆಯಲಿದೆ. ಬಳಿಕ ಭಜನೆ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

 

ಮಧ್ಯಾಹ್ನ 2 ಗಂಟೆಯಿಂದ ನಾಡಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಇಂದ್ರಜಿತು ಕಾಳಗ–ಕುಶಲವ’ಯಕ್ಷಗಾನ ಬಯಲಾಟ ನಡೆಯಲಿದೆ.

 

ಸಂಜೆ 5 ಗಂಟೆಯಿಂದ ಸಂಧ್ಯಾಪೂಜೆ, ವಿಸರ್ಜನಾ ಪೂಜೆ ಹಾಗೂ ಪ್ರಾರ್ಥನೆ ನೆರವೇರಿದ ಬಳಿಕ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಲಿದೆ.

 

ಐದು ದಿನಗಳ ಕಾಲ ನಡೆಯುವ ಈ ಗಣೇಶೋತ್ಸವದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.