09 September 2026 |

ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ’

  • 09 Sep 2026 12:26:30 PM

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ ‘ಹುಟ್ಟೂರ ಸನ್ಮಾನ’ ಕಾರ್ಯಕ್ರಮದಲ್ಲಿ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಭವ್ಯ ಸನ್ಮಾನ ಸಲ್ಲಿಸಲಾಯಿತು.

 

ಕನ್ನಡಿಗರ ಕೂಟ, ದುಬೈನ ದೀರ್ಘಕಾಲದ ಪರಂಪರೆಯಾದ ಕರ್ನಾಟಕದ ಗಣ್ಯರನ್ನು ಅವರ ಹುಟ್ಟೂರಿನಲ್ಲೇ ಗೌರವಿಸುವ ಸಂಸ್ಕೃತಿ ಈ ವರ್ಷವೂ ಮುಂದುವರಿಯಿತು. ಕನ್ನಡ ಭಾಷೆ, ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಕೂಟದ ಬದ್ಧತೆ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಸ್ಪಷ್ಟವಾಯಿತು.

ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷರಾದ ಅರುಣ್ ಕುಮಾರ್ ಎಂ.ಕೆ. ಹಾಗೂ ಸಂಯುಕ್ತ ಪ್ರಧಾನ ಕಾರ್ಯದರ್ಶಿ ದೀಪಕ್ ಸೋಮಶೇಖರ ಉಪಸ್ಥಿತರಿದ್ದರು.

 

ಪ್ರಸಿದ್ಧ ಜನಪದ ಗಾಯಕ ಗೋ.ನಾ. ಸ್ವಾಮಿ ಅವರ ಮನಮುಟ್ಟುವ ಹಾಡುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಜನಪ್ರಿಯ ಗಾಯಕ ಹಾಗೂ ಮಿಮಿಕ್ರಿ ಕಲಾವಿದ ರವೀ ಸಂತು ಕಾರ್ಯಕ್ರಮವನ್ನು ಮನರಂಜನಾತ್ಮಕವಾಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗಾಂಧಿವಾದಿ ಹಾಗೂ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿ.ಬಿ. ಸೋಮಶೇಖರ್, ಕೂಟದ ಹಿರಿಯ ಸದಸ್ಯ ತಿಮ್ಮಪ್ಪ ಗೌಡ ಹಾಗೂ ಇಟಲಿ ಕನ್ನಡ ಸಂಘದ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

 

ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪ ಅವರು ಕನ್ನಡಿಗರ ಕೂಟ, ದುಬೈಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ‘ಹುಟ್ಟೂರ ಸನ್ಮಾನ’ ನೀಡಿ ಗೌರವಿಸಿದ್ದಕ್ಕಾಗಿ ಸಂಘದ ಅಧ್ಯಕ್ಷರು ಹಾಗೂ ಸಂಪೂರ್ಣ ತಂಡಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

 

ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ನಡಿಗರ ಕೂಟ, ದುಬೈನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು, ಕನ್ನಡ ಜನಪದ ಹಾಗೂ ಕಲಾ ಪರಂಪರೆಯನ್ನು ಉಳಿಸಿ, ಬೆಳೆಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲಾ ಸಮಿತಿ ಸದಸ್ಯರು ಹಾಗೂ ಸಲಹಾ ಮಂಡಳಿಯ ಸದಸ್ಯರಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.