ಹಣ್ಣುಗಳು ಜೀವಸತ್ವಗಳು, ಖನಿಜಗಳು, ನಾರು ಮತ್ತು ನೀರು ಮುಂತಾದ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು, ಹೃದಯದ ಆರೋಗ್ಯ ಕಾಪಾಡಲು ಮತ್ತು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಹಣ್ಣುಗಳು ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಕಡಿಮೆ ಪ್ರಮಾಣದ ಕೊಬ್ಬನ್ನು ಹೊಂದಿರುವ ಆಹಾರವಾಗಿದೆ. ಹಣ್ಣಿನ ರಸಕ್ಕಿಂತ ತಾಜಾ ಹಣ್ಣಿನ ಸೇವನೆ ಉತ್ತಮ. ಹಣ್ಣುಗಳ ಸೇವನೆಯಿಂದ ನಮ್ಮ ತ್ವಚೆಯ ಕಾಂತಿಯು ಹೆಚ್ಚುತ್ತದೆ. ಪ್ರತಿದಿನ ಒಂದು ಹಣ್ಣು ತಿನ್ನುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.
ವಿವಿಧ ಹಣ್ಣುಗಳಿಂದ ಆಗುವ ಆರೋಗ್ಯ ಪ್ರಯೋಜನಗಳು:
ದಾಳಿಂಬೆ: ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತ ಹೀನತೆಯನ್ನು ತಡೆಯುತ್ತದೆ
ಪರಂಗಿ ಹಣ್ಣು: ಕಣ್ಣು ಮತ್ತು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ.
ಕಿತ್ತಳೆ: ವಿಟಮಿನ್ ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ತೂಕ ನಿರ್ವಹಣೆಗೆ ಸಹಕಾರಿಯಾಗಿದೆ.
ಕಿವಿ ಹಣ್ಣು: ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ಹೆಚ್ಚಾಗಿದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಇದು ಹೆಚ್ಚು ಫೈಬರ್ ಹೊಂದಿದ್ದು ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯಕ.
ಸೇಬು ಹಣ್ಣು: ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಸಹಕಾರಿ. ದಿನಕ್ಕೊಂದು ಸೇಬು ಸೇವನೆ ವೈದ್ಯರಿಂದ ದೂರವಿಡುತ್ತದೆ ಎಂಬ ಮಾತಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ದ್ರಾಕ್ಷಿ ಹಣ್ಣು: ಹೆಚ್ಚು ನೀರಿನಾಂಶ ಮತ್ತು ಸಕ್ಕರೆ ಅಂಶವನ್ನು ಹೊಂದಿದೆ. ಬೆಳೆಯುವ ಮಕ್ಕಳಿಗೆ ಉತ್ತಮ. ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ.
ಸ್ಟಾರ್ ಫ್ರೂಟ್: ಹೃದಯ ಸಂಬಂಧಿ ಹಾಗೂ ನರ ಸಂಬಂಧಿ ತೊಂದರೆಗೆ ಉತ್ತಮ ಔಷಧಿ. ಜೀರ್ಣಶಕ್ತಿ ಹೆಚ್ಚಿಸುತ್ತದೆ.
ನೇರಳೆ ಹಣ್ಣು: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಪ್ರಯೋಜನಕಾರಿ. ಇದು ಮಧುಮೇಹ ಸ್ನೇಹಿಯಾಗಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಕಲ್ಲಂಗಡಿ ಹಣ್ಣು: ದೇಹಕ್ಕೆ ತಂಪು ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಬಾಳೆಹಣ್ಣು: ಜೀರ್ಣಕ್ರಿಯೆಗೆ ಸಹಕಾರಿ. ಶಕ್ತಿ ಮತ್ತು ಪೋಷಣೆಯನ್ನು ಒದಗಿಸುತ್ತದೆ. ಅಜೀರ್ಣದ ಸಮಸ್ಯೆಯನ್ನು ನಿವಾರಿಸುತ್ತದೆ.
ಅಂಜೂರ: ಬಿಪಿ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ತೂಕ ನಿರ್ವಹಣೆಗೆ ಸಹಕಾರಿ.
ಡ್ರ್ಯಾಗನ್ ಫ್ರೂಟ್: ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ನಿರ್ವಹಣೆಗೆ ಸಹಾಯ ಮಾಡಲು, ಹೃದಯ ಮತ್ತು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ. ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ನೆಲ್ಲಿಕಾಯಿ: ನೆಲ್ಲಿಕಾಯಿಯು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ತುಂಬ ಲಾಭಕಾರಿ. ವಿಟಮಿನ್ ಸಿ ಸಮೃದ್ಧವಾಗಿದ್ದು, ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಲು ಬಳಸಬಹುದು. ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಯಾಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೂದಲು ಉದುರುವಿಕೆ, ಕೂದಲು ಬಿಳಿಯಾಗುವಿಕೆ ಸಮಸ್ಯೆಗೆ ಇದು ಪರಿಣಾಮಕಾರಿ.
ಹಣ್ಣುಗಳು ಸರಿಯಾದ ಜೀರ್ಣಿಸುವಿಕೆಯಲ್ಲಿ ನೆರವಾಗುತ್ತದೆ. ಅವುಗಳನ್ನು ನಿಯಮಿತವಾಗಿ ಬಳಸುವ ವ್ಯಕ್ತಿಗಳಿಗೆ ದೀರ್ಘಾಯುಷ್ಯವಿರುತ್ತದೆ. ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಉತ್ತಮ. ಊಟದ ನಂತರ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಊಟದ ನಂತರ ಕನಿಷ್ಠ 30 ನಿಮಿಷಗಳ ಅಂತರ ಇರಬೇಕು. ಮಲಗುವ ವೇಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಆದ್ದರಿಂದ ಸರಿಯಾದ ಸಮಯದಲ್ಲಿ ನಿಯಮಿತ ಪ್ರಮಾಣದ ಹಣ್ಣುಗಳ ಸೇವನೆಯನ್ನು ಮಾಡುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳೋಣ. ನಮ್ಮ ಆರೋಗ್ಯದ ಗುಟ್ಟು ಈ ಹಣ್ಣುಗಳಲ್ಲಿದೆ..





