ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸುತ್ತಿರುವ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ ಉದ್ಯೋಗ ಮೇಳ’ವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆರಂಭವಾದ ಈ ಮೇಳವು ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಉದ್ಯೋಗ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿ ಬೆಳೆದಿದೆ ಎಂದು ಹೇಳಿದರು.
ಪ್ರತಿಷ್ಠಾನ ಇದುವರೆಗೆ ನಡೆಸಿದ ಉದ್ಯೋಗ ಮೇಳಗಳಲ್ಲಿ 250ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಭಾಗವಹಿಸಿದ್ದು, ಇದುವರೆಗೆ ನಡೆದ ಮೇಳಗಳಲ್ಲಿ 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, ಅವರಲ್ಲಿ 40,848 ಮಂದಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ" ಎಂದು ಅವರು ತಿಳಿಸಿದರು.
ಈ ವರ್ಷದ ಮೇಳದಲ್ಲಿ 300ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬ್ಯಾಂಕಿಂಗ್ ಮತ್ತು ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನಾ ವಲಯ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ ಸೇವೆ, ದೂರಸಂಪರ್ಕ, ಆರೋಗ್ಯ, ಮಾಧ್ಯಮ, ನಿರ್ಮಾಣ, ಎಲೆಕ್ಟ್ರಾನಿಕ್ಸ್, ಶಿಕ್ಷಣ ಹಾಗೂ ಎನ್‌ಜಿಒ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ನಡೆಸಲಿವೆ.
ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ವಾಣಿಜ್ಯ, ನಿರ್ವಹಣಾ ಅಧ್ಯಯನ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್‌ಗಳು, ಪಿಯುಸಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಅಭ್ಯರ್ಥಿಗಳಿಗಾಗಿ ಆಗಸ್ಟ್ 6ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆಯೂ ಇರಲಿದೆ. ಅಭ್ಯರ್ಥಿಗಳು ಆಗಸ್ಟ್ 7ರಂದು ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಾಗಬೇಕು. ಜೊತೆಗೆ 10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು, ನವೀಕರಿಸಿದ ಬಯೋಡೇಟಾ, ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು ಹಾಗೂ ಆನ್‌ಲೈನ್ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 9741440490 ಸಂಖ್ಯೆಗೆ ಸಂಪರ್ಕಿಸಬಹುದು. ಕಂಪನಿಗಳ ನೋಂದಣಿಗೆ 9731953123 ಸಂಖ್ಯೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.





