ಕಡೇಶಿವಾಲಯ: ಮೊಗರ್ನಾಡು ಸಾವಿರ ಸೀಮೆಯ ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ 2026ರ ಜುಲೈ 5ರಂದು ಭಾನುವಾರ ಶೀಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಭಕ್ತರಲ್ಲಿ ಸಹಕಾರ ಕೋರಿ ಮನವಿ ಮಾಡಿದೆ.
ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಗ್ರಾಮ ಹಾಗೂ ಸುತ್ತಮುತ್ತಲಿನ ಭಕ್ತರ ಬಹುಕಾಲದ ಕನಸಾಗಿದ್ದು, ಶೀಲಾನ್ಯಾಸದೊಂದಿಗೆ ಕಾಮಗಾರಿಗಳು ಆರಂಭಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವ ಪೂರ್ಣಗೊಳ್ಳುವವರೆಗೆ ಹೊಸ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಗುದ್ದಲಿ ಪೂಜೆ ನಡೆಸಲು ಅವಕಾಶ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.
ಆದ್ದರಿಂದ ಹೊಸ ಮನೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಭಕ್ತಾದಿಗಳು ಜುಲೈ 5ರೊಳಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ, ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ದೇವಸ್ಥಾನದ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಜೀರ್ಣೋದ್ದಾರ ಗೌರವ ಸಲಹೆಗಾರರು ಮನವಿ ಮಾಡಿದ್ದಾರೆ.
ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಮಹತ್ವದ ಹೆಜ್ಜೆಯಾಗಿದ್ದು, ಪ್ರತಿಯೊಬ್ಬ ಭಕ್ತರೂ ತಮ್ಮದೇ ಸೇವೆಯೆಂದು ಭಾವಿಸಿ ಸಹಕರಿಸುವಂತೆ ಕೋರಲಾಗಿದೆ.





