27 July 2025 | Join group

ಕನಸು ಮುರಿದ ಕಥೆ : ವಿದ್ಯಾರ್ಥಿನಿಯರಿಗೆ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ನಿರಾಕರಣೆ : ಏನಿದರ ರಹಸ್ಯ?

  • 29 Mar 2025 06:37:18 PM

ಬೆಳ್ತಂಗಡಿ : ಪ್ರತಿಯೊಬ್ಬ ಪೋಷಕರ ಕನಸು ತನ್ನ ಮಗ ಅಥವಾ ಮಗಳು ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣವಾಗಬೇಕೆಂದು ಅದೇ ರೀತಿ ಪ್ರತಿಯೊಂದು ಶಾಲಾ ಶಿಕ್ಷಕರ ಕನಸು ತಾನು ಕಳಿಸಿದ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಬೇಕು ಎನ್ನುವುದು. ಆದರೆ ಕಲಿಯುತ್ತಿರುವ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಹೋದರೆ ಅದರಿಂದ ಆಗುವ ಸಂಕಟ ಬೇರೆಯೇ ಆಗಿರುತ್ತದೆ.

 

ಹೌದು ಓದುಗರೇ, ಈ ರೀತಿಯ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಪ್ರೌಢ ಶಾಲೆಯಲ್ಲಿ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಅಪರೂಪದ ಘಟನೆ ನಡೆದಿದೆ.

 

ಕೆಲ ಮೂಲಗಳ ಪ್ರಕಾರ, ಶಾಲೆಗೆ ಶೇಕಡ 100 ಫಲಿತಾಂಶ ಬರಬೇಕು ಎಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ್ದರೆ ಎಂದು ಆರೋಪಿಸಲಾಗಿದೆ. ಈ ಎರಡು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದು ಫೇಲ್ ಆದರೆ ಶಾಲೆಗೆ 100 ಶೇಕಡ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಮಹತ್ವದ ಹತ್ತನೇ ತರಗತಿಯ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ ಎಂದು ಒಂದಿಷ್ಟು ಮೂಲಗಳಿಂದ ತಿಳಿದುಬಂದಂತೆ.

 

ಪತ್ರ ಬರೆದ ವಂಚಿತ ವಿದ್ಯಾರ್ಥಿನಿಯರು

ಅವಕಾಶ ವಂಚಿತರಾಗಿರುವ ವಿದ್ಯಾರ್ಥಿನಿಯರು, ಮಕ್ಕಳ ಹಕ್ಕುಗಳ ಆಯೋಗ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದಾರೆ ಮತ್ತು ಅವರು ಶಾಲೆಗೆ ಬಂದು ವಿಷಯ ಸಂಗ್ರಹಣೆ ಮಾಡಿರುತ್ತಾರೆ. ತದನಂತರ ಬೆಳ್ತಂಗಡಿಯ ತಾಲೂಕು ಶಿಕ್ಷಣಾಧಿಕಾರಿ ತಾರಕೇಸರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಹಾಲ್ ಟಿಕೆಟ್ ಮರಳಿ ಕೊಟ್ಟ ವಿದ್ಯಾರ್ಥಿಗಳು

ಇಲ್ಲಿ ಅಚ್ಚರಿಯ ವಿಷಯವೇನೆಂದರೆ, ಶಿಕ್ಷಣಾಧಿಕಾರಿಯ ಆದೇಶದ ಮೇರೆಗೆ ಪರೀಕ್ಷೆ ಪತ್ರವನ್ನು ಪಡೆದ ಇಬ್ಬರಲ್ಲಿ ಒಂದು ಹುಡುಗಿ ಪರೀಕ್ಷಾ ಪತ್ರ ಪಡೆದು ಸ್ವಲ್ಪ ಸಮಯದಲ್ಲೇ ಹಿಂತುರುಗಿಸಿದ್ದು, ಮತ್ತೊಬ್ಬಳು ಪರೀಕ್ಷಾ ಪತ್ರವನ್ನು ಪಡೆಯಲು ಕೂಡ ಬರದೇ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಯಾವುದೊ ಕಾಣದ ಕೈ ಹಿಂದೆಯಿಂದ ಈ ವಿದ್ಯಾರ್ಥಿಗಳಿಗೆ ಒತ್ತಡ ಹಾಕುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.