ದೆಹಲಿ: ದೇಶದಾದ್ಯಂತ ಮಾರಾಟವಾಗುವ ಎಲ್ಲಾ ಪಾನ್ ಮಸಾಲಾ ಪ್ಯಾಕ್‌ಗಳಲ್ಲಿ ₹1 ಮತ್ತು ₹2 ರಷ್ಟು ಚಿಕ್ಕ ಸ್ಯಾಚೆಟ್‌ಗಳನ್ನು ಸೇರಿಕೊಂಡು ಫೆಬ್ರವರಿ 1, 2026ರಿಂದಲೇ ರಿಟೇಲ್ ಸೇಲ್ ಪ್ರೈಸ್ (RSP) ಅನ್ನು ಸ್ಪಷ್ಟವಾಗಿ ಮುದ್ರಿಸುವುದು ಕಡ್ಡಾಯವಾಗಲಿದೆ.
ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರುವ ಮೂಲಕ ಬೆಲೆ ಪಾರದರ್ಶಕತೆಗೆ ಮತ್ತು ತೆರಿಗೆ ವಸೂಲಾತಿಯ ನಿಖರತೆಗೆ ಆದ್ಯತೆ ನೀಡಿದೆ. ಚಿಕ್ಕ ಪ್ಯಾಕ್‌ಗಳಿಗೆ ಬೆಲೆ ಮುದ್ರಿಸುವ ಕಡ್ಡಾಯವಿಲ್ಲದೆ ಇರುವ ಕಾರಣ ಅನೇಕ ಪ್ರದೇಶಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ವಸೂಲಾತಿ ನಡೆಯುತ್ತಿತ್ತು. ಜೊತೆಗೆ, RSP ಆಧಾರಿತ ತೆರಿಗೆ ಲೆಕ್ಕಾಚಾರಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯೂ ಇತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಣ್ಣ ಪ್ಯಾಕ್‌ಗಳಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ.
ಹೊಸ ನಿಯಮದ ಪ್ರಕಾರ:
ದೇಶದ ಯಾವ ಕಂಪನಿಯೇ ಪಾನ್ ಮಸಾಲಾ ಉತ್ಪಾದಿಸಿದರೂ, ಪ್ಯಾಕ್‌ನ ಗಾತ್ರ ಯಾವುದೇ ಆಗಿರಲಿ, RSP ಸ್ಪಷ್ಟವಾಗಿ ಮುದ್ರಿಸಲೇಬೇಕು.
ಮುದ್ರಣವು ಗ್ರಾಹಕರಿಗೆ ಸುಲಭವಾಗಿ ಕಾಣುವಂತಾಗಬೇಕು ಮತ್ತು ಅಳಿಸಿಬಿಡಲಾಗದ ರೀತಿಯಲ್ಲಿ ಇರಬೇಕು.
2026ರ ಫೆಬ್ರವರಿ 1ರಿಂದಲೇ ಉತ್ಪಾದನೆಯಾಗುವ ಎಲ್ಲಾ ಪ್ಯಾಕ್‌ಗಳಿಗೆ ಇದು ಅನ್ವಯಿಸುತ್ತದೆ.
ಸರ್ಕಾರದ ಪ್ರಕಾರ, “ಬೆಲೆ ಪಾರದರ್ಶಕತೆ ಜಾರಿಯಾದರೆ ಗ್ರಾಹಕರು ನಿಖರ ದರವನ್ನು ತಿಳಿಯಬಹುದು ಮತ್ತು ಸರಿಯಾದ GST ಹಾಗೂ ಇತರೆ ತೆರಿಗೆಗಳನ್ನು ಸರ್ಕಾರಕ್ಕೆ ಸಂಗ್ರಹಿಸಲು ಸಹಕಾರಿ ಆಗುತ್ತದೆ” ಎಂದು ತಿಳಿಸಿದೆ. ಹೊಸ ನಿಯಮ ಜಾರಿಗೆ ಬಂದರೆ, ಪಾನ್ ಮಸಾಲಾ ವಲಯದಲ್ಲಿ ಬೆಲೆ ಗೊಂದಲಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.





