ನವದೆಹಲಿ: ಯಾವುದೇ ದೇಶದ ಉನ್ನತ ನಾಯಕರು ವಿದೇಶ ಪ್ರವಾಸ ಕೈಗೊಂಡಾಗ, ಆತಿಥೇಯ ರಾಷ್ಟ್ರದ ಸಚಿವರು ಅಥವಾ ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ತೆರಳಿ ಅವರ ಸ್ವಾಗತ ಮಾಡುವುದು ದೀರ್ಘಕಾಲದ ರಾಜತಾಂತ್ರಿಕ ಶಿಷ್ಟಾಚಾರ. ವಿಶೇಷ ಸಂದರ್ಭಗಳಲ್ಲಿ ಮಾತ್ರ ದೇಶದ ಮುಖ್ಯಸ್ಥರು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅತಿಥಿಯನ್ನು ಗೌರವದಿಂದ ಬರಮಾಡಿಕೊಳ್ಳುತ್ತಾರೆ.
ಇದು ಅಪರೂಪದ ಗೌರವ, ಆ ನಾಯಕರಿಗೆ ನೀಡುವ ವಿಶಿಷ್ಟ ಸಂದೇಶ.
ಭಾರತವು ಕೂಡ ಇದೇ ಪರಂಪರೆಯನ್ನು ಅನುಸರಿಸುತ್ತಿದ್ದು, ಹಲವು ವಿದೇಶಿ ಗಣ್ಯರುಗಳಿಗೆ ತಮ್ಮದೇ ಆದ ರೀತಿಯಲ್ಲಿ ಶಿಸ್ತಿನ ಸ್ವಾಗತ ನೀಡಿದೆ. ಆದರೆ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ, ಕೆಲ ಸೂಚಕ ಕ್ಷಣಗಳಲ್ಲಿ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ವಿದೇಶಿ ನಾಯಕರಿಗೆ ಸ್ವಾಗತ ಸಲ್ಲಿಸಿರುವುದು ವಿಶೇಷ ಗಮನ ಸೆಳೆದಿದೆ. ಸಾಮಾನ್ಯವಾಗಿ ಕಿರಿಯ ಮಂತ್ರಿಗಳು ನಿರ್ವಹಿಸುವ ಕಾರ್ಯವನ್ನು ಮೋದಿ ತಾವು ಮಾಡಿರುವುದು ರಾಜತಾಂತ್ರಿಕತೆಯಲ್ಲಿ ವಿಶ್ವಾಸ, ಸ್ನೇಹ, ಮತ್ತು ನಿಕಟತೆ ಯ ಸಂಕೇತವೆಂದು ವಿಶ್ಲೇಷಿಸಲಾಗಿದೆ.
ಮೋದಿ ಮಾಡಿದ ವಿಶೇಷ ವಿಮಾನ ನಿಲ್ದಾಣ ಸ್ವಾಗತ — ಒಟ್ಟು 7 ಬಾರಿ
ಮೇ 2014ರಿಂದ ಇದುವರೆಗೂ, ಮೋದಿ 7 ಸಂದರ್ಭಗಳಲ್ಲಿ ವೈಯಕ್ತಿಕವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ವಿಶ್ವದ ಪ್ರಮುಖ ನಾಯಕರಿಗೆ ಸ್ವಾಗತ ನೀಡಿದ್ದಾರೆ. ಅವುಗಳ ಪಟ್ಟಿ ಹೀಗಿದೆ:
| ದಿನಾಂಕ | ನಾಯಕ | ದೇಶ |
|---|---|---|
|
ಜನವರಿ 2015 |
ಬರಾಕ್ ಒಬಾಮಾ |
ಅಮೇರಿಕ ಸಂಯುಕ್ತ ಸಂಸ್ಥಾನ |
|
ಏಪ್ರಿಲ್ 2017 |
ಶೇಖ್ ಹಸೀನಾ |
ಬಾಂಗ್ಲಾದೇಶ |
|
ಸೆಪ್ಟೆಂಬರ್ 2017 |
ಶಿಂಜೊ ಅಬೆ |
ಜಪಾನ್ |
|
ಫೆಬ್ರವರಿ 2020 |
ಡೊನಾಲ್ಡ್ ಟ್ರಂಪ್ |
ಅಮೇರಿಕ ಸಂಯುಕ್ತ ಸಂಸ್ಥಾನ |
|
ಫೆಬ್ರವರಿ 2024 |
ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ |
ಯುಎಇ |
|
ಮಾರ್ಚ್ 2025 |
ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ |
ಕತಾರ್ |
|
ಡಿಸೆಂಬರ್ 2025 |
ವ್ಲಾಡಿಮಿರ್ ಪುಟಿನ್ |
ರಷ್ಯಾ |
ಈ ಸ್ವಾಗತ ಯಾಕೆ ವಿಶೇಷ?
ಆಯಾ ದೇಶದ ಪ್ರಧಾನಿ ವಿಮಾನ ನಿಲ್ದಾಣಕ್ಕೆ ತೆರಳುವುದು ಕೇವಲ ಶಿಷ್ಟಾಚಾರವಲ್ಲ. ಇದು ಆ ರಾಷ್ಟ್ರದೊಂದಿಗೆ ಭಾರತದ ಸಂಬಂಧದ ಗಂಭೀರತೆಯನ್ನು ತೋರಿಸುವ ಸಂಕೇತ. ಸ್ನೇಹಪೂರ್ಣ ಸಂಬಂಧ ಗಟ್ಟಿಯಾಗುತ್ತಿದೆ, ಯೋಜನೆಗಳ ಮೇಲೆ ಜಂಟಿ ವಿಶ್ವಾಸವಿದೆ ಮತ್ತು ರಾಜತಾಂತ್ರಿಕತೆಯಲ್ಲಿ ಹೊಸ ಆರಂಭಕ್ಕೆ ಬೀಗ ತೆರುತ್ತಿದೆ ಇಂತಹ ಸೂಚನೆಗಳನ್ನು ನೀಡುವುದಾಗಿ ತಜ್ಞರು ವಿವರಿಸುತ್ತಾರೆ.
ಉದಾಹರಣೆಗೆ, ಬರಾಕ್ ಒಬಾಮಾ ಮತ್ತು ಡೊನಾಲ್ಡ್ ಟ್ರಂಪ್‍ರ ಆಗಮನಗಳು ಅಮೇರಿಕಾ ಮತ್ತು ಭಾರತ ಸಂಬಂಧ ಬಲಪಡಿದ ಕ್ಷಣಗಳಾಗಿದ್ದು, ಯುಎಇ, ಕತಾರ್ ಮೊದಲಾದ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಶಕ್ತಿ, ಆರ್ಥಿಕ ಮತ್ತು ಪ್ರವಾಸೋದ್ಯಮ ಸಂಬಂಧ ಹೊಸ ಮಟ್ಟಕ್ಕೆ ಏರಿರುವ ಸಮಯಗಳಲ್ಲಿ ಈ ಸ್ವಾಗತ ನಡೆದಿದೆ.
2025ರ ಡಿಸೆಂಬರ್‌ನಲ್ಲಿ ವ್ಲಾಡಿಮಿರ್ ಪುಟಿನ್‍ರ ಸ್ವಾಗತವೂ ಜಾಗತಿಕ ರಾಜಕೀಯ ಮತ್ತು ರಕ್ಷಣಾ ಸಹಕಾರದ ಹಿನ್ನೆಲೆಯಲ್ಲಿಯೇ ಮಹತ್ವ ಪಡೆದಿದೆ. ಒಟ್ಟಾರೆಯಾಗಿ ಅಪರೂಪದ ಈ 7 ಸ್ವಾಗತಗಳು ಭಾರತವು ವಿಶ್ವರಂಗದಲ್ಲಿ ಹೊಂದಿರುವ ಸ್ಥಾನಮಾನವನ್ನು ಸೂಚಿಸುತ್ತದೆ.





