ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಮೊತ್ತವನ್ನು ಅಧಿಕೃತ ವೆಬ್‌ಸೈಟ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಮಾತ್ರವೇ ಪಾವತಿಸಬೇಕು. ಇದರ ಹೊರತಾಗಿ ಟ್ರಾಫಿಕ್ ಫೈನ್ ಪಾವತಿಸಲು ಪೊಲೀಸ್ ಇಲಾಖೆಯ ಯಾವುದೇ ಅಧಿಕೃತ ಆ್ಯಪ್ ಇಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೆಲವು ವಂಚಕರು Apk ಫೈಲ್‌ಗಳ ಮೂಲಕ ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ, ಟ್ರಾಫಿಕ್ ದಂಡ ಪಾವತಿಸುವಂತೆ ಅನುಮಾನಾಸ್ಪದ ಲಿಂಕ್‌ಗಳನ್ನು ಸಾರ್ವಜನಿಕರಿಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ Apk ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದ ತಕ್ಷಣ ಮೊಬೈಲ್ ಫೋನ್ ಹ್ಯಾಕ್ ಆಗಿ, ಬಳಕೆದಾರರ ವೈಯಕ್ತಿಕ ಹಾಗೂ ಬ್ಯಾಂಕ್ ಸಂಬಂಧಿತ ಮಾಹಿತಿಯು ವಂಚಕರ ಕೈ ಸೇರುತ್ತದೆ. ಬಳಿಕ ರಿಯಲ್-ಟೈಮ್ OTPಗಳ ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ಎಗರಿಸಲಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಮಾತ್ರವೇ ಇಂತಹ ಎರಡು ಪ್ರಕರಣಗಳು ವರದಿಯಾಗಿದ್ದು, ಇಬ್ಬರು ವ್ಯಕ್ತಿಗಳು ಹಣ ಕಳೆದುಕೊಂಡಿದ್ದಾರೆ ಎಂಬ ದೂರುಗಳು ಪೊಲೀಸ್ ಇಲಾಖೆಗೆ ಲಭಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅದು ಪ್ಲೇಸ್ಟೋರ್‌ನಲ್ಲಿರುವ ಅಧಿಕೃತ ಆವೃತ್ತಿಯೇ ಎಂಬುದನ್ನು ಪರಿಶೀಲಿಸಬೇಕು. ಲಿಂಕ್ ಮೂಲಕ ಅಥವಾ ನೇರ Apk ಫೈಲ್‌ಗಳ ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.





