09 January 2026 | Join group

ನಿಷ್ಠೆಗೆ ₹1,500 ಕೋಟಿ ಗೌರವ: ಮುಕೇಶ್ ಅಂಬಾನಿ ನೀಡಿದ ಅಪೂರ್ವ ಉಡುಗೊರೆ

  • 07 Jan 2026 08:25:41 PM

ಮುಂಬಯಿ: ನಿಷ್ಠೆಗಿಂತ ಅಮೂಲ್ಯವಾದ ಸೊತ್ತು ಮತ್ತೊಂದಿಲ್ಲ. ನಿಷ್ಠೆಯಿಂದ ಮಾಡುವ ಕೆಲಸದ ಪ್ರತಿಫಲ ಕೆಲವೊಮ್ಮೆ ತಡವಾಗಬಹುದು; ಆದರೆ ಒಂದಲ್ಲೊಂದು ದಿನ ಅದು ಖಂಡಿತ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆ ಅನೇಕ ಜನರಿಗೆ ಇದೆ.

 

ಆದರೆ ಬದಲಾಗುತ್ತಿರುವ ಇಂದಿನ ಕಾಲಘಟದಲ್ಲಿ, ನಿಷ್ಠಾವಂತರಿಗೆ ಲಾಭ ಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸಿಕ್ಕರೆ ಅವರು ನಿಜಕ್ಕೂ ಪುಣ್ಯವಂತರು ಎನ್ನಬಹುದು.

 

ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ, ರಿಲಯನ್ಸ್ ಗ್ರೂಪ್‌ನ ಮಾಲಕ ಹಾಗೂ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ, ತಮ್ಮ ವಿಶ್ವಾಸಾರ್ಹ ಸಹಾಯಕ ಹಾಗೂ ಆಪ್ತ ಸ್ನೇಹಿತ ಮನೋಜ್ ಮೋದಿಗೆ ನೀಡಿದ ಅಪೂರ್ವ ಉಡುಗೊರೆ ಸಾಕ್ಷಿಯಾಗಿದೆ.


ಹೌದು, ಮುಕೇಶ್ ಅಂಬಾನಿ ತಮ್ಮ ದೀರ್ಘಕಾಲದ ಗೆಳೆಯ ಮತ್ತು ಸಹಾಯಕ ಮನೋಜ್ ಮೋದಿಗೆ 22 ಅಂತಸ್ತಿನ ಭವ್ಯ ಕಟ್ಟಡವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ವರದಿಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ.


ಸೌತ್ ಮುಂಬೈನಲ್ಲಿರುವ ಈ ಪ್ರೀಮಿಯಂ ಕಟ್ಟಡ, ಭಾರತದ ಅತ್ಯಂತ ದುಬಾರಿ ವಸತಿ ಪ್ರದೇಶಗಳಲ್ಲೊಂದಾದ ನೇಪಿಯನ್ ಸೀ ರೋಡ್ನಲ್ಲಿ ಸ್ಥಿತವಾಗಿದೆ. ಈ ಕಟ್ಟಡದ ಮೌಲ್ಯವನ್ನು ಸುಮಾರು ₹1,500 ಕೋಟಿ ಎಂದು ಅಂದಾಜಿಸಲಾಗಿದೆ.


ಬಹು ವರದಿಗಳ ಪ್ರಕಾರ, ಸುಮಾರು 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ 22 ಅಂತಸ್ತಿನ ‘ವೃಂದಾವನ’ ಎಂಬ ಕಟ್ಟಡವನ್ನು ಮುಕೇಶ್ ಅಂಬಾನಿ ಮನೋಜ್ ಮೋದಿಗೆ ಗಿಫ್ಟ್ ಆಗಿ ನೀಡಿದ್ದಾರೆ.


ಮನೋಜ್ ಮೋದಿ 1980ರ ದಶಕದಿಂದಲೂ ರಿಲಯನ್ಸ್ ಸಂಸ್ಥೆಯ ಪ್ರಮುಖ ತಂತ್ರಜ್ಞರಾಗಿದ್ದು, ಅಂಬಾನಿ ಕುಟುಂಬದ ಮೂರು ತಲೆಮಾರುಗಳೊಂದಿಗೆ ಕೆಲಸ ಮಾಡಿದ ವಿಶ್ವಾಸಾರ್ಹ ವ್ಯಕ್ತಿ ಎಂಬ ಖ್ಯಾತಿಯನ್ನು ಹೊಂದಿದ್ದಾರೆ.


ಈ ಘಟನೆ ನಿಷ್ಠೆ, ನಂಬಿಕೆ ಮತ್ತು ದೀರ್ಘಕಾಲದ ಸಂಬಂಧಗಳ ಮೌಲ್ಯವನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪಿಸುತ್ತದೆ.