09 January 2026 | Join group

ರಾಜಕೀಯದಲ್ಲಿ ಎಲ್ಲವೂ ಸಾಧ್ಯ: ಅಂಬರ್‌ನಾಥ್‌ನಲ್ಲಿ ಬಿಜೆಪಿ–ಕಾಂಗ್ರೆಸ್ ಒಂದೇ ಪಾಳಯ

  • 08 Jan 2026 05:56:45 PM

ಮಹಾರಾಷ್ಟ್ರ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ದಿನ ಬೆಳಗಾಗುವಷ್ಟರಲ್ಲಿ ಎಲ್ಲಿಂದ ಎಲ್ಲಿಗೆ ಜಿಗಿಯುವ ರಾಜಕಾರಣಿಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಒಂದು ದಿನ ನಿರಂತರವಾಗಿ ಬೇರೆ ಪಕ್ಷದ ಮೇಲೆ ವಿಷಕಾರುವ ನಾಯಕರು, ಮರುದಿನವೇ ಅದೇ ಪಕ್ಷದ ನಾಯಕರ ತೊಡೆಯ ಮೇಲೆ ಕುಳಿತು ಆ ಪಕ್ಷವನ್ನು ಶ್ಲಾಘಿಸುವ ದೃಶ್ಯಗಳು ಹೊಸದೇನಲ್ಲ.

 

ಆದರೆ ಇಲ್ಲಿ ನಾವು ಹೇಳುತ್ತಿರುವ ವಿಚಾರ ಈ ಎಲ್ಲದಕ್ಕಿಂತಲೂ ಭಿನ್ನವಾಗಿದ್ದು, ಯಾರು ಊಹಿಸಲೂ ಸಾಧ್ಯವಾಗದಂತಹದ್ದಾಗಿದೆ. ಮಹಾರಾಷ್ಟ್ರದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮೆಲ್ಲಾ ವೈರತ್ವವನ್ನು ಮರೆತು ಮೈತ್ರಿ ಮಾಡಿಕೊಂಡಿರುವುದು ರಾಜಕೀಯ ವಲಯದಲ್ಲೇ ಅಚ್ಚರಿಯನ್ನುಂಟು ಮಾಡಿದೆ. ಈ ಬೆಳವಣಿಗೆ ಎರಡೂ ಪಕ್ಷಗಳ ಬೆಂಬಲಿಗರು ಮತ್ತು ಮತದಾರರನ್ನು ದಿಗ್ಭ್ರಮೆಗೆ ಒಳಪಡಿಸಿದೆ.

 

ಹೌದು, ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಯ ತಿರುವು ಕಂಡುಬಂದಿದ್ದು, ಅಂಬರ್‌ನಾಥ್ ಪುರಸಭೆಯಲ್ಲಿ ಕಾಂಗ್ರೆಸ್‌ನ ಎಲ್ಲಾ 12 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಪುರಸಭೆಯ ಅಧಿಕಾರ ಸಮೀಕರಣವೇ ಸಂಪೂರ್ಣವಾಗಿ ಬದಲಾಗಿದೆ.

 

ಶಿವಸೇನೆಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಬಿಜೆಪಿ–ಕಾಂಗ್ರೆಸ್ ತಾತ್ಕಾಲಿಕ ಮೈತ್ರಿ ಮಾಡಿಕೊಂಡಿತ್ತು. ಆದರೆ ನಂತರ ಅದನ್ನೇ “ಅಸಹ್ಯಕರ” ಎಂದು ಹೇಳಿದ ಕಾಂಗ್ರೆಸ್ ತನ್ನ ಸ್ಥಳೀಯ ಘಟಕವನ್ನು ಅಮಾನತುಗೊಳಿಸಿತ್ತು. ಅಮಾನತಿನ ಬೆನ್ನಲ್ಲೇ 12 ಕಾಂಗ್ರೆಸ್ ಕೌನ್ಸಿಲರ್‌ಗಳು ಬಿಜೆಪಿಯ ತೆಕ್ಕೆಗೆ ಜಾರಿದ್ದಾರೆ.

 

ಈ ಬೆಳವಣಿಗೆಯೊಂದಿಗೆ 60 ಸದಸ್ಯರ ಅಂಬರ್‌ನಾಥ್ ಪುರಸಭೆಯಲ್ಲಿ ಬಿಜೆಪಿ ನೇತೃತ್ವದ ‘ಅಂಬರ್‌ನಾಥ್ ವಿಕಾಸ್ ಅಘಾಡಿ’ಗೆ ಬಹುಮತ ದೊರೆತಿದೆ. ಬಿಜೆಪಿ ಇದನ್ನು “ಅಭಿವೃದ್ಧಿಗಾಗಿ ತೆಗೆದುಕೊಂಡ ನಿರ್ಧಾರ” ಎಂದು ಸಮರ್ಥಿಸಿಕೊಂಡರೆ, ಕಾಂಗ್ರೆಸ್ ಈ ಕ್ರಮವನ್ನು “ದ್ವಿಮುಖ ರಾಜಕೀಯ” ಎಂದು ಕಟುವಾಗಿ ಟೀಕಿಸಿದೆ.

 

ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಮೈತ್ರಿ, ಅಮಾನತು ಮತ್ತು ಪಕ್ಷಾಂತರ—all-in-one ಎನ್ನುವ ಚಿತ್ರಣ ಮತ್ತೊಮ್ಮೆ ಸ್ಪಷ್ಟವಾಗಿ ಮೂಡಿಬಂದಿದೆ.ಆದಾಗ್ಯೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಮೈತ್ರಿಯನ್ನು ತೀವ್ರವಾಗಿ ಖಂಡಿಸಿದ್ದು, ಇದರ ಬಗ್ಗೆ ಪ್ರಶ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ಸ್ಥಳೀಯ ಘಟಕಗಳು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ನಮ್ಮಲ್ಲಿಗೆ ತಲುಪದೇ ಇರುವುದರಿಂದ ಈ ರೀತಿಯ ಗೊಂದಲಗಳು ನಡೆಯುತ್ತವೆ ಎಂದಿದ್ದಾರೆ.