09 January 2026 | Join group

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಕೇಂದ್ರದ ಯೋಜನೆಗಳಲ್ಲಿ ಮಹತ್ವದ ಬದಲಾವಣೆ

  • 08 Jan 2026 10:26:20 AM

ನವದೆಹಲಿ: ಭಾರತದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭಾರತದಾದ್ಯಂತ ಹಿರಿಯ ನಾಗರಿಕರಿಗೆ ಹಲವಾರು ಪ್ರೋತ್ಸಾಹದಾಯಕ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸಿಗುವ ಸೌಲಭ್ಯಗಳಾಗಿವೆ. ಹಿರಿಯ ನಾಗರಿಕರಿಗೆ ಸರಕಾರವು ಹೊಸ ಹಣಕಾಸು, ಆರೋಗ್ಯ ಮತ್ತು ಪ್ರಯಾಣ ಸಂಬಂಧಿತ ಯೋಜನೆಗಳನ್ನು ಪರಿಚಯಿಸುತ್ತಿದೆ.

 

ಘೋಷಿಸಲಾದ ಪ್ರಮುಖ ಬದಲಾವಣೆಗಳು ಮತ್ತು ಹೊಸ ಪ್ರಯೋಜನಗಳು ಇಂತಿವೆ.

 

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY):

70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರನ್ನು ಸೇರಿಸಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY)ಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಯುಷ್ಮಾನ್ ಭಾರತ್ ಅರ್ಹ ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತಿದ್ದು ಹೊಸ ಪ್ರಸ್ತಾವನೆಯಲ್ಲಿ ಈ ವಿಮಾ ವ್ಯಾಪ್ತಿಯನ್ನು 10 ಲಕ್ಷಕ್ಕೆ ಏರಿಸಿದೆ ಮತ್ತು ಈ ವಿಸ್ತರಣೆಯು ಹಿರಿಯ ನಾಗರಿಕರಿಗೆ ಹಾಗೂ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಆರೋಗ್ಯ ಸೇವೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

 

ಆದಾಯ ತೆರಿಗೆ ವಿನಾಯಿತಿಗಳು:

ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸರಕಾರ ಯೋಜಿಸುತ್ತಿದೆ. ಪ್ರಸ್ತುತ ಹಿರಿಯ ನಾಗರಿಕರು (60 ರಿಂದ 79 ವರ್ಷ) ₹3 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯುತ್ತಾರೆ ಹಾಗೂ ಸೂಪರ್ ಹಿರಿಯ ನಾಗರಿಕರು (80 + ವರ್ಷ) ₹ 5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯುತ್ತಿದ್ದರು. ಆದರೆ ಹೊಸ ಪ್ರಸ್ತಾವನೆಯು ಈ ವಿನಾಯಿತಿ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸುವ ಯೋಜನೆ ಇದೆ.

 

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಯಲ್ಲಿ ಸುಧಾರಣೆ (Senior Citizen Saving Scheme):

ಎಸ್ ಸಿ ಎಸ್ ಎಸ್ - ಒಂದು ವಿಶ್ವಾಸ ಹೂಡಿಕೆಯಾಗಿದ್ದು, ಇದು ಪ್ರಸ್ತುತ 8.2% ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಇದು ಸ್ಥಿರ ಮತ್ತು ಸುರಕ್ಷಿತ ಲಾಭವನ್ನು ಒದಗಿಸುವ ಯೋಜನೆಯಾಗಿದ್ದು ಈ ಉಳಿತಾಯದ ಮೇಲೆ ಉತ್ತಮ ಲಾಭವನ್ನು ಒದಗಿಸಲು ಬಡ್ಡಿ ದರವನ್ನು ಹೆಚ್ಚಿಸಲು ಸರಕಾರ ಪರಿಗಣಿಸುತ್ತಿದೆ.

 

ರೈಲ್ವೆ ಟಿಕೆಟ್ ರಿಯಾಯಿತಿಗಳು:

ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಒದಗಿಸಿದ್ದ 50% ಪ್ರಯಾಣದ ರಿಯಾಯಿತಿಯನ್ನು ಕೋವಿಡ್ 19ರ ಸಂದರ್ಭದಲ್ಲಿ ಆರ್ಥಿಕ ನಿರ್ಬಂಧಗಳಿಂದಾಗಿ ಈ ಪ್ರಯೋಜನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಪ್ರಸ್ತುತ ಅದನ್ನು ಮುಂದುವರಿಸುವ ಯೋಚನೆಯಲ್ಲಿ ಯೋಜನೆಯು ಸಿದ್ಧಗೊಳ್ಳುತ್ತಿದೆ.

 

ಹಣಕಾಸು ಸಚಿವರು ತೆಗೆದುಕೊಂಡ ಈ ಹೊಸ ಯೋಜನಾ ಕ್ರಮಗಳು ಹಿರಿಯ ನಾಗರಿಕರ ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರ ಘೋಷಣೆಗಳು ಹಿರಿಯ ನಾಗರಿಕರ ಕಲ್ಯಾಣ ನೀತಿಗಳಲ್ಲಿ ಒಂದು ಮಹತ್ತರ ತಿರುವು ನೀಡಲಿದೆ. ಇದರಿಂದ ಹಿರಿಯ ನಾಗರಿಕರು ಹೆಚ್ಚಿನ ಸೌಕರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಲಿದೆ.