ಬೆಂಗಳೂರು: 2026ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯು ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ನಡೆಯಲಿದೆ. ಈ ವರ್ಷ ಪರೀಕ್ಷೆಯ ಅರ್ಹತಾ ಅಂಕಗಳು 35ರ ಬದಲಾಗಿ ಕೇವಲ 33ಕ್ಕೆ ಇಳಿಸಲಾಗಿದೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಅಂಕಗಳ ಸುಧಾರಣೆಗಾಗಿ ಈ ವರ್ಷ ಎಸ್ ಎಸ್ ಎಲ್ ಸಿ ಗೆ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳು ಹಾಗೂ ಪಿಯುಸಿಗೆ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯಲಿದೆ. ಶಾಲಾ ಶಿಕ್ಷಣ ಮಂಡಳಿಯೇ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡಿ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಲಿದೆ.
ಎಸ್ ಎಸ್ ಎಲ್ ಸಿ ಯ ಮೊದಲನೇ ಪೂರ್ವ ಸಿದ್ಧತಾ ಪರೀಕ್ಷೆಯು ಜನವರಿ ತಿಂಗಳ ಮೊದಲನೇ ವಾರದಲ್ಲಿ, ಎರಡನೇ ಪರೀಕ್ಷೆಯು ಜನವರಿ ತಿಂಗಳ ಕೊನೆಯ ವಾರದಲ್ಲಿ ಮತ್ತು ಮೂರನೇ ಪೂರ್ವಸಿದ್ಧತಾ ಪರೀಕ್ಷೆಯು ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ನಡೆಯಲಿದೆ.
ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಮುಂಬರುವ ಮುಖ್ಯ ಪರೀಕ್ಷೆಗೆ ಸಿದ್ಧರಾಗಲು ಅತ್ಯಂತ ಉತ್ತಮ ಮಾರ್ಗದರ್ಶಕವಾಗಿರುತ್ತದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿದೆ.
ಪರೀಕ್ಷೆ ನಡೆದ ಮರುದಿನವೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು. ನಂತರ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಕಲಿಕೆಯ ಕೊರತೆಯನ್ನು ಪೋಷಕರಿಗೆ ತಿಳಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡಲು ಈ ಪೂರ್ವ ಸಿದ್ಧತಾ ಪರೀಕ್ಷೆಗಳು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಶಾಲಾ ಶಿಕ್ಷಕರಿಗೆ ನೀಡಲಾಗಿದೆ.





