ಕರ್ನಾಟಕ ಯಾವ ಸ್ಥಾನದಲ್ಲಿದೆ ಮತ್ತು ದೇಶದಲ್ಲಿ ಎಷ್ಟು ವಕ್ಫ್ ಭೂಮಿ ಇದೆ? ಇಲ್ಲಿದೆ ವಿವರ

  • 04 Apr 2025 04:18:09 PM

Waqf Board, April 04, 2025 : ವಕ್ಫ್ ತಿದ್ದುಪಡಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಹಳ ಚರ್ಚೆ ಮತ್ತು ವಿಮರ್ಶೆಗಳ ನಡುವೆ ಅಂಗೀಕಾರವಾಗಿದೆ. ಶೀಘ್ರದಲ್ಲೇ ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾಯಿದೆಯಾಗಿ ಹೊಸ ರೂಪದಲ್ಲಿ ಬರಲಿದೆ. 

 

  • ಲೋಕಸಭೆಯಲ್ಲಿ 02ನೇ ಏಪ್ರಿಲ್ ಬುಧವಾರದಂದು ಅಂಗೀಕಾರ 
  • ರಾಜ್ಯಸಭೆಯಲ್ಲಿ 03ನೇ ಏಪ್ರಿಲ್ ಗುರುವಾರದಂದು ಅಂಗೀಕಾರ 
  • ಪರ ವಿರೋಧಗಳ ನಡುವೆ ಅಂಗೀಕಾರವಾದ ವಕ್ಫ್ ತಿದ್ದುಪಡಿ 
  • ಲೋಕಸಭೆಯಲ್ಲಿ ಪರವಾಗಿ 288 ಮತ್ತು 232 ಮತ ವಿರುದ್ಧವಾಗಿ ಚಲಾವಣೆಯಾಗಿದೆ 
  • ರಾಜ್ಯಸಭೆಯಲ್ಲಿ ಪರವಾಗಿ 128 ಮತ ಮತ್ತು ವಿರೋಧವಾಗಿ 95 ಮತ ಚಲಾವಣೆಯಾಗಿದೆ.

 

ದೇಶದಲ್ಲಿ ಈಗ ಒಟ್ಟು ವಕ್ಫ್‌ ಆಸ್ತಿಗಳ ವಿವರ ಬಹಿರಂಗವಾಗಿದೆ. ಮಾರ್ಚ್ 14, 2025ರ ಹೊತ್ತಿಗೆ, ದೇಶಾದ್ಯಂತ 8.72 ಲಕ್ಷ ವಕ್ಫ್ ಆಸ್ತಿಗಳಿದ್ದು, ಇವುಗಳ ವಿಸ್ತೀರ್ಣ 38 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿದೆ ಎಂದು ವರದಿಯಾಗಿದೆ.

 

ಲೋಕಸಭೆಯಲ್ಲಿ ಅಂಗೀಕಾರವಾದ ಮರುದಿನ, ನಿರೀಕ್ಷೆಯಂತೆ ರಾಜ್ಯಸಭೆಯಲ್ಲೂ ಗುರುವಾರ ಮುಂಜಾನೆ ವಕ್ಫ್‌ ತಿದ್ದುಪಡಿ ವಿಧೇಯಕ-2025 ಅಂಗೀಕಾರಗೊಂಡಿದೆ. ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಬಹಳ ಚರ್ಚೆ ಮತ್ತು ವಿಮರ್ಶೆಗಳ ನಂತರ ವಿಧೇಯಕಕ್ಕೆ ಸಂಸತ್ ಅನುಮೋದನೆಯ ಮುದ್ರೆ ಒತ್ತಲಾಗಿದೆ.

 

ವಕ್ಫ್ ತಿದ್ದುಪಡಿಯ ಆದ್ಯತೆಗಳಾದ, ವಕ್ಫ್‌ ಆಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ, ಸುಧಾರಣೆ, ಮಹಿಳೆಯರಿಗೆ ಪ್ರಾತಿನಿಧ್ಯ ಮತ್ತು ಇನ್ನಿತರ ಹಳೆಯ ಕಾಯಿದೆಯಲ್ಲಿದ್ದ ಕೆಲವು ವಿವಾದಾತ್ಮಕ ಅಂಶಗಳನ್ನು ತಿದ್ದುಪಡಿ ಮಾಡುವ ಮೂಲಕ ಅಂಗೀಕರಿಸಲಾಗಿದೆ.

 

ದೇಶದಲ್ಲಿರುವ ಒಟ್ಟು ವಕ್ಫ್ ಅಸ್ತಿ 

ದೇಶಾದ್ಯಂತ 8.72 ಲಕ್ಷ ವಕ್ಫ್ ಆಸ್ತಿಗಳಿವೆ. ಇವುಗಳ ವಿಸ್ತೀರ್ಣ 38 ಲಕ್ಷ ಎಕರೆಗಳಿಗಿಂತಲೂ ಹೆಚ್ಚು. ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾ (ಡಬ್ಲ್ಯೂಎಎಂಎಸ್‌ಐ) ಪೋರ್ಟಲ್‌ನಲ್ಲಿಯೇ ಈ ಮಾಹಿತಿ ಲಭ್ಯವಿದ್ದು ಇದು ಮಾರ್ಚ್ 14, 2025ರವರೆಗಿನ ಅಂಕಿಅಂಶವಾಗಿದೆ.

 

ರಾಜ್ಯಗಳಲ್ಲಿರುವ ವಕ್ಫ್ ಆಸ್ತಿಗಳು

ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವಕ್ಫ್‌ ಆಸ್ತಿಗಳಿವೆ. ಸುನ್ನಿ ವಕ್ಫ್‌ ಮಂಡಳಿ ಹೆಸರಿನಲ್ಲಿ 2.17 ಲಕ್ಷ ಆಸ್ತಿ ಇದೆ. ಆದರೆ ಇದರ ಒಟ್ಟು ವಿಸ್ತೀರ್ಣದ ಅಂಕಿ - ಅಂಶಗಳು ನಮೂದಿಸಿಲ್ಲ. ನಂತರ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದ್ದು 80,480 ವಕ್ಫ್‌ ಆಸ್ತಿಗಳಿದ್ದರೆ, ಪಂಜಾಬ್‌ನಲ್ಲಿ 75,965, ತಮಿಳುನಾಡಿನಲ್ಲಿ 66,092 ಮತ್ತು ಕರ್ನಾಟಕದಲ್ಲಿ 62,830 ವಕ್ಫ್‌ ಆಸ್ತಿಗಳಿದ್ದು, ಕರ್ನಾಟಕ ರಾಜ್ಯ ಐದನೇ ಸ್ಥಾನದಲ್ಲಿದೆ.

 

ವಿಸ್ತೀರ್ಣ ನೋಡುವುದಾದರೆ, ಮಧ್ಯ ಪ್ರದೇಶದಲ್ಲಿ ಗರಿಷ್ಠ 6.79 ಲಕ್ಷ ಎಕರೆ ವಕ್ಫ್‌ ಭೂಮಿ ಇದೆ. ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು,  6.55 ಲಕ್ಷ ಎಕರೆ ಹೊಂದಿಕೊಂಡಿದೆ ಮತ್ತು ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 5.96 ಲಕ್ಷ ಎಕರೆ ವಕ್ಫ್‌ ಜಾಮೀನು ಹೊಂದಿದೆ ಎಂದು ನಮೂದಿಸಲಾಗಿದೆ.

 

ಆದ್ದರಿಂದ ವಕ್ಫ್ ನಲ್ಲಿ ನಮೂದಿಸಲಾದ ನಿಖರ ಒಟ್ಟು ಅಸ್ತಿ 8,72,328 ಇದ್ದರೆ, ಜಮೀನಿನ ವಿಸ್ತಾರ ಒಟ್ಟು 38,16,291.788 ಇದೆ.