ಉಪ್ಪಿನಂಗಡಿಯಲ್ಲಿ ಬೆಂಗಳೂರಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬಳಿ ಪಲ್ಟಿ : ಒಬ್ಬ ಪ್ರಯಾಣಿಕ ಮೃತ್ಯು,12 ಮಂದಿಗೆ ಗಾಯ

  • 04 Apr 2025 05:32:33 PM

Puttur, April 04,2025 : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿ ಸಮೀಪ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

 

ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

 

ಏಪ್ರಿಲ್ 4 ರಂದು ಬೆಳಗಿನ ಜಾವಾ 5 ಗಂಟೆಗೆ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಬಸ್ ಪಲ್ಟಿ ಹೊಡೆದಿದೆ ಎಂದು ತಿಳಿದುಬಂದಿದೆ.

 

ಮೃತಪಟ್ಟವರನ್ನು ಬೆಂಗಳೂರು ಗ್ರಾಮಾಂತರದ ಯಡಿಯೂರು ನಿವಾಸಿ ಹರ್ಷ (24) ಎಂದು ಗುರುತಿಸಲಾಗಿದೆ. ಅವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮಂಗಳೂರು ಹೊರವಲಯದ ಮುಲ್ಕಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

 

ಗಾಯಗೊಂಡ 12 ಮಂದಿಯಲ್ಲಿ 11 ಜನರು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಬೇರೆ ವಾಹಗಳ ಚಲನೆಗೆ ಅಡ್ಡಿಯಾಗದಂತೆ ಪೊಲೀಸರು ಎಚ್ಚರಿಕೆಯ ಕ್ರಮಕೈಗೊಂಡಿದ್ದಾರೆ.