26 July 2025 | Join group

ಬಂಟ್ವಾಳ: ಕಿಂಡಿ ಆಣೆಕಟ್ಟಿನಿಂದ ತೋಟಗಳಿಗೆ ನೀರು ನುಗ್ಗಿ ರೈತರಿಗೆ ಸಮಸ್ಯೆ – ಶಾಸಕರಿಂದ ತಾತ್ಕಾಲಿಕ ಪರಿಹಾರ, ನಿಟ್ಟಿಸುರು ಬಿಟ್ಟ ರೈತರು

  • 18 Feb 2025 01:12:33 AM

Bantwal : ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಕಿಂಡಿ ಆಣೆಕಟ್ಟಿನ ಪರಿಣಾಮವಾಗಿ ಸ್ಥಳೀಯ ಕೃಷಿಕರು ತೋಟಗಳಿಗೆ ನೀರು ನುಗ್ಗಿದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆಣೆಕಟ್ಟಿನ ಗೇಟ್‌ಗಳನ್ನು ಮುಚ್ಚಿದ ಪರಿಣಾಮವಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ, ಸುತ್ತಲಿನ ಅಡಿಕೆ ತೋಟಗಳು ಜಲಾವೃತಗೊಂಡಿದ್ದವು.

 

ಸಮಸ್ಯೆಯಿಂದ ಕಂಗಾಲಾದ ರೈತರು ಮಾನ್ಯ ಶಾಸಕರಲ್ಲಿ ನೆರವಿಗಾಗಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಫೆಬ್ರವರಿ 17, 2025 ರಂದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಅವಲೋಕನ ನಡೆಸಿದರು. ಹೊಸದಾಗಿ ನಿರ್ಮಾಣಗೊಂಡ ಈ ಆಣೆಕಟ್ಟಿನಲ್ಲಿ ಒಟ್ಟು 21 ಗೇಟ್‌ಗಳನ್ನು ಅಳವಡಿಸಿ ಸುಮಾರು 5 ಮೀಟರ್ ನೀರು ಶೇಖರಣೆ ಮಾಡಲಾಗಿತ್ತು. ಆದರೆ ನೀರಿನ ಮಟ್ಟ ಏರುತ್ತಿದ್ದಂತೆ ತೋಟಗಳಿಗೆ ನೀರು ನುಗ್ಗಿ ರೈತರಿಗೆ ಸಂಕಟ ಉಂಟಾಯಿತು.

 

ಶಾಸಕರ ಭೇಟಿ ವೇಳೆ ಸ್ಥಳೀಯ ರೈತರು ಶಾಶ್ವತ ಪರಿಹಾರಕ್ಕಾಗಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಶಾಸಕರೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆ ಕಡಿಮೆಗೊಳಿಸಲು ಕನಿಷ್ಠ ಗೇಟ್‌ಗಳನ್ನು ತೆರೆಯುವಂತೆ ಸೂಚನೆ ನೀಡಿದರು.ಶಾಸಕರ ಸೂಚನೆಯ ಮೇರೆಗೆ 21 ಗೇಟ್‌ಗಳ ಪೈಕಿ 7 ಗೇಟ್‌ಗಳನ್ನು ತೆರೆಯಲಾಯಿತು. ಇದರಿಂದ ತೋಟಗಳಿಗೆ ನೀರು ನುಗ್ಗುವ ಪ್ರಮಾಣ ಕಡಿಮೆಯಾಗಿದ್ದು, ರೈತರು ಸ್ವಲ್ಪ ನಿರಾಳರಾಗಿದ್ದಾರೆ. ಆದರೆ ಶಾಶ್ವತ ಪರಿಹಾರಕ್ಕಾಗಿ ಕ್ರಮಕೈಗೊಳ್ಳುವಂತೆ ಅವರು ಮತ್ತೆ ಮನವಿ ಮಾಡಿದರು.

 

ಶಾಸಕರ ಪ್ರತಿಕ್ರಿಯೆ:
"ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು. ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಮುಂದಿಟ್ಟಿರುವೆ. ಮಂಗಳೂರಿನಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ" ಎಂದು ಶಾಸಕರು ತಿಳಿಸಿದರು.

 

ಸ್ಥಳದಲ್ಲಿ ಹಾಜರಿದ್ದವರು:
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರು ಎ. ಗೋವಿಂದ ಪ್ರಭು, ಬಿಜೆಪಿ ಮುಖಂಡರಾದ ಜಗದೀಶ್ ಚೆಂಡ್ತಿಮಾರ್, ಕಾರ್ತಿಕ್ ಬಲ್ಲಾಳ್, ಸುದರ್ಶನ್ ಬಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸಯ್ಯದ್ ಅತಿಕೋಡ್, ಸಾಜುದ್ದೀನ್, ರಾಕೇಶ್, ಶಿವಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

 

ಈ ಯೋಜನೆಯ ಬಗ್ಗೆ:
ಸುಮಾರು ₹135 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕಿಂಡಿ ಆಣೆಕಟ್ಟು 166 ಎಂಸಿಎಫ್‌ಟಿ ನೀರು ಶೇಖರಣೆಯ ಸಾಮರ್ಥ್ಯ ಹೊಂದಿದ್ದು, ಇದು ಮಂಗಳೂರು ಹಾಗೂ ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯೊಂದಿಗೆ ಕೃಷಿ ತೋಟಗಳಿಗೂ ಅನುಕೂಲಕರವಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುವ ಈ ಯೋಜನೆಯ ನಿರ್ವಹಣೆ ಶಾಶ್ವತವಾಗಿ ಸುಗಮವಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.