14 ವರ್ಷದ ಹುಡುಗ ತಾಯಿಗೆ ಹೆರಿಗೆ ಮಾಡಿಸಿದ ಧೈರ್ಯಶಾಲಿ ಘಟನೆ

  • 06 Apr 2025 07:54:44 PM

April 06. 2025: ಗರ್ಭಿಣಿಯ ಡೆಲಿವೆರಿ ನೋವು ಅವಳಿಗೆ ಮಾತ್ರ ಅನುಭವವಾಗುವ ಒಂದು ತೀವ್ರವಾದ ಅನುಭವ. ಹಿಂದಿನ ಕಾಲದಲ್ಲಿ ಮನೆ ವೈದ್ಯರು ಅಥವಾ ಮನೆಯ ಹಿರಿಯರು ಗರ್ಭಿಣಿ ತಾಯಿಗೆ ಹೆರಿಗೆ ಮಾಡಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸರ್ವೇಸಾಮಾನ್ಯ.

 

ಚೀನಾ ದೇಶದಲ್ಲಿ 13 ವರ್ಷದ ಬಾಲಕನೊಬ್ಬ ತನ್ನ ತಾಯಿಗೆ ಹೆರಿಗೆ ಮಾಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನಲ್ಲಿ ಈ ಹುಡುಗನ ಧೈರ್ಯಶಾಲಿ ಕೆಲಸದ ಬಗ್ಗೆ ವರದಿ ಮಾಡಿದೆ. 

 

ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡಾಗ, ಈ ಹದಿಹರೆಯದ ಬಾಲಕನು ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಯಿಂದ ಮಾರ್ಗದರ್ಶನ ಪಡೆದು ಹೆರಿಗೆ ಮಾಡಿಸಿದ್ದಾನೆ ಎನ್ನಲಾಗಿದೆ. 

 

37 ವಾರಗಳ ಗರ್ಭಿಣಿಯಾಗಿದ್ದ ತಾಯಿಗೆ ತೀವ್ರ ನೋವಿನಿಂದ ಬಳಲುತ್ತಿದ್ದ ವೇಳೆ ಬಾಲಕ ತಕ್ಷಣ ತುರ್ತು ಕೇಂದ್ರಕ್ಕೆ ಕರೆ ಮಾಡಿ, ಮಗುವಿನ ತಲೆ ಹೊರಗೆ ಬಂದಿದೆ ಎಂದು ತಿಳಿಸಿದ್ದಾನಂತೆ.  ಇದನ್ನು ಕೇಳಿಸಿಕೊಂಡ ವೈದ್ಯಕೀಯ ಸಿಬ್ಬಂದಿ ವರ್ಗ, ತಾಯಿಯ ತುರ್ತು ಪರಿಸ್ಥಿತಿಯನ್ನು ಅರಿತು ಭಯಬೀತಗೊಂಡಿದ್ದರಂತೆ. ನಂತರ ಅವರು ಹುಡುಗನಿಗೆ ಕೆಲವು ಮಾರ್ಗದರ್ಶನ ಮಾಡುವ ಮೂಲಕ ಬಾಲಕನೇ ಖುದ್ದು ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ. 

 

ಆಂಬ್ಯುಲೆನ್ಸ್ ನಲ್ಲಿ ಬರುತ್ತಿದ್ದ ವೈದ್ಯರು ಫೋನ್ ಮೂಲಕವೇ ಮನೆಗೆ ತಲುಪುವವರೆಗೆ ಸೂಚನೆ ನೀಡಿದ್ದಾರೆ. ಆ ಸಂದರ್ಭದಲ್ಲಿ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ಅವರನ್ನು ಹೇಗೆ ಶಾಂತಗೊಳಿಸಬೇಕು ಮತ್ತು ಮಗುವಿನ ಜನನಕ್ಕೆ ಹೇಗೆ ಸಹಕಾರಿಯಾಗಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ವೈದ್ಯರ ಸೂಚನೆ ಸಲಹೆಗಳನ್ನು ಸರಿಯಾಗಿ ಪಾಲಿಸಿದ ಹುಡುಗ, ತನ್ನ ತಾಯಿಗೆ ಗಂಡು ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾನೆ.

 

ಇನ್ನು ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸುವ ಸಮಯ ಬಂದಾಗ ಹುಡುಗನಿಗೆ ಸ್ವಚ್ಛವಾದ ದಾರ ಸಿಗಲಿಲ್ಲವಂತೆ.  ಆ ಸಮಯದಲ್ಲಿ ವೈದ್ಯರು ಮಾಸ್ಕ್ ನ ದಾರವನ್ನು ಬಳಸಲು ಸಲಹೆ ನೀಡಿದ್ದು ಸೋಂಕು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡಿದ್ದಾರೆ. ಈ ಸಮಯದಲ್ಲಿ ವೈದ್ಯರುಗಳು ಮನೆಗೆ ತಲುಪಿದ್ದು, ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮುಂದಿನ ಚಿಕಿತ್ಸೆ ನೀಡಿ, ತಾಯಿ ಮತ್ತು ಮಗು ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.  ಹುಡುಗನ ಈ ಧೈರ್ಯಶಾಲಿ ಕಾರ್ಯಕ್ಕೆ ಬಹಳ ಮೆಚ್ಚುಗೆ ಬಂದಿದೆ.