14 June 2026 |

ಮಂಗಳೂರು: 42.7 ಕೆಜಿ ಆನೆದಂತ ಜಪ್ತಿ; ಅಂತಾರಾಜ್ಯ ಜಾಲದ ಮೂವರು ಆರೋಪಿಗಳು ಸಿಐಡಿ ಬಲೆಗೆ

  • 13 Jun 2026 02:48:55 PM

ಮಂಗಳೂರು: ಆನೆ ದಂತಗಳ ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಸಿಐಡಿ ಅರಣ್ಯ ಘಟಕವು ಮೂವರು ಆರೋಪಿಗಳನ್ನು ಬಂಧಿಸಿ, 42.7 ಕೆಜಿ ತೂಕದ ಎರಡು ಆನೆದಂತಗಳನ್ನು ವಶಪಡಿಸಿಕೊಂಡಿದೆ. ಪ್ರಕರಣದಲ್ಲಿ ಬಳಸಲಾಗಿದ್ದ ಎರಡು ಕಾರುಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

ಮಂಗಳೂರು ನಗರದ ಪಡವು ಗ್ರಾಮದ ಮಾರೋಳಿ ಜೋಡುಕಟ್ಟೆ ಪ್ರದೇಶದಲ್ಲಿ ಆನೆದಂತಗಳ ಮಾರಾಟಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಸಿಐಡಿ ಅರಣ್ಯ ಘಟಕಕ್ಕೆ ಲಭಿಸಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ದಾಳಿ ನಡೆಸಿ, ವ್ಯವಹಾರಕ್ಕಾಗಿ ಕಾಯುತ್ತಿದ್ದ ಆರೋಪಿಗಳನ್ನು ಬಂಧಿಸಿದರು.

 

ಬಂಧಿತರು ಬೆಳ್ತಂಗಡಿ ತಾಲೂಕಿನ ಶಶಾಂಕ್ ಪುದುವೆಟ್ಟು, ಕೇರಳದ ಮಂಜೇಶ್ವರದ ಅಬ್ದುಲ್ ಖಾದರ್ ಹಾಗೂ ಮಂಗಳೂರಿನ ಅಟ್ಟಾವರದ ಪ್ರಭಾಚಂದ್ರ ಎಂದು ಗುರುತಿಸಲಾಗಿದೆ.

 

ಕಾರ್ಯಾಚರಣೆಯ ವೇಳೆ ಪತ್ತೆಯಾದ ಎರಡು ಆನೆದಂತಗಳ ಒಟ್ಟು ತೂಕ 42.7 ಕೆಜಿ ಎಂದು ತಿಳಿದುಬಂದಿದೆ. ಅಲ್ಲದೆ ದಂತಗಳ ಸಾಗಾಟ ಮತ್ತು ವ್ಯವಹಾರಕ್ಕಾಗಿ ಬಳಸಲಾಗಿದ್ದ ಎರಡು ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

 

ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್‌ಪಿ ಪವನ್ ನೆಟ್ಟೂರ್ ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಸಿಐಡಿ ಅರಣ್ಯ ಮೊಬೈಲ್ ಸ್ಕ್ವಾಡ್‌ನ ಪಿಎಸ್‌ಐ ದಿಲೀಪ್ ಜಿ.ಆರ್ ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿದೆ.