ಮಂಗಳೂರು/ಅಸ್ಸಾಂ: ಅಸ್ಸಾಂ ರಾಜ್ಯದಲ್ಲಿ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿ ಐವರು ಸಿಬ್ಬಂದಿ ಹುತಾತ್ಮರಾಗಿರುವ ದುರ್ಘಟನೆ ನಡೆದಿದೆ.
ಜೋರ್ಹತ್‌ನಲ್ಲಿರುವ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ನೆಲಕ್ಕಿಳಿಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಪರಿಣಾಮ ಐವರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹ ಪೈಲಟ್ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ ಇಳಿದ ಬಳಿಕ ವಾಯುನೆಲೆ ಆವರಣದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ರೌರಿಯಾ ಪ್ರದೇಶದ ಐಎಎಫ್ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಸ್ಕ್ವಾಡ್ರನ್ ಲೀಡರ್ ಪ್ರಶಾಂತ್ ಸಿಂಗ್, ಶುಭಂ ಕುಮಾರ್, ಜಿತೇಂದ್ರ ಶರ್ಮಾ, ಖೇಮಾರಾಮ್ ಕುಮಾವತ್ ಹಾಗೂ ದಾನಿಶ್ ಆಲಂ ಮೃತಪಟ್ಟಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ದುರಂತದ ಹಿನ್ನೆಲೆ ಸಂಪೂರ್ಣ ತನಿಖೆ ನಡೆಸಲು ತನಿಖಾ ನ್ಯಾಯಾಲಯಕ್ಕೆ ಆದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.





