14 June 2026 |

ಸಿಎಂ ಆದ ನಂತರ ಪ್ರಧಾನಿ ಮೋದಿ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್‌; ಕರ್ನಾಟಕದ ಅಭಿವೃದ್ಧಿಗೆ 18 ಪ್ರಮುಖ ಮನವಿಗಳು

  • 13 Jun 2026 03:09:22 PM

ನವದೆಹಲಿ: ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡಿ.ಕೆ. ಶಿವಕುಮಾರ್‌ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ 18 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು, ಅಗತ್ಯ ಅನುದಾನ, ಅನುಮೋದನೆ ಹಾಗೂ ಕೇಂದ್ರದ ಸಹಕಾರ ಒದಗಿಸುವಂತೆ ಮನವಿ ಸಲ್ಲಿಸಿದರು.

 

ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್‌, ಸಭೆ ಮುಗಿದ ನಂತರ ಗುರುವಾರ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾದರು. ಭೇಟಿ ವೇಳೆ ಬಸವಣ್ಣನ ಪ್ರತಿಮೆಯನ್ನು ನೀಡಿ ಪ್ರಧಾನಿಯನ್ನು ಗೌರವಿಸಿದರು.

 

ಭೇಟಿಯ ಬಳಿಕ ಮಾತನಾಡಿದ ಅವರು, ದೇಶದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ನಿರಂತರವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಲು, ಹೂಡಿಕೆ ಹಾಗೂ ಅವಕಾಶಗಳನ್ನು ಹೆಚ್ಚಿಸಲು ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರದೊಂದಿಗೆ ಸಮನ್ವಯವಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇನೆ ಎಂದು ತಿಳಿಸಿದರು.

 

ಪ್ರಧಾನಿಗೆ ಸಲ್ಲಿಸಲಾದ ಪ್ರಮುಖ ಬೇಡಿಕೆಗಳು ಹೀಗಿವೆ:

1. ಮೇಕೆದಾಟು ಯೋಜನೆಗೆ ತ್ವರಿತವಾಗಿ ಕೇಂದ್ರದ ಅನುಮೋದನೆ ನೀಡಬೇಕು.

2. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪಿಗೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆಯನ್ನು ಶೀಘ್ರ ಪ್ರಕಟಿಸಬೇಕು.

3. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ₹5,300 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು.

4. ಕಳಸಾ-ಬಂಡೂರಿ ಯೋಜನೆಗೆ ಅಗತ್ಯವಾದ ಅರಣ್ಯ ಹಾಗೂ ವನ್ಯಜೀವಿ ಅನುಮತಿಗಳನ್ನು ಮಂಜೂರು ಮಾಡಬೇಕು.

5. ಸೊಂತಿ ಏತ ನೀರಾವರಿ, ಯುಕೆಪಿ ಇಂಡಿ ಶಾಖಾ ಕಾಲುವೆ, ಮಲಪ್ರಭ ಕಾಲುವೆ ಮತ್ತು ಘಟಪ್ರಭಾ ಬಲದಂಡೆ ಕಾಲುವೆ ಸೇರಿ ₹11,122 ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ನೆರವು ಒದಗಿಸಬೇಕು.

6. ನದಿಗಳ ಜೋಡಣೆ ಯೋಜನೆಯಡಿ ಗೋದಾವರಿ-ಕಾವೇರಿ ಹಾಗೂ ಬೇಡ್ತಿ-ವರದಾ ಸಂಪರ್ಕ ಯೋಜನೆಗಳಲ್ಲಿ ರಾಜ್ಯಕ್ಕೆ ಕನಿಷ್ಠ 40 ರಿಂದ 45 ಟಿಎಂಸಿ ನೀರಿನ ನ್ಯಾಯಯುತ ಹಂಚಿಕೆ ನೀಡಬೇಕು.

7. 2025-26ನೇ ಸಾಲಿನ ಗ್ರಾಮ ಪಂಚಾಯಿತಿ ಅನುದಾನವಾಗಿ ಬಾಕಿ ಇರುವ ₹2,860 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು.

8. ರಾಷ್ಟ್ರೀಯ ಆರ್ಥಿಕತೆಯಲ್ಲಿ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ₹26,000 ಕೋಟಿ ನೆರವು ನೀಡಬೇಕು.

9. ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಕೇಂದ್ರದ ಅನುಮೋದನೆ ದೊರಕಿಸಬೇಕು.

10. ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್‌ ಯೋಜನೆಗಳನ್ನು ಶೀಘ್ರ ಜಾರಿಗೊಳಿಸಬೇಕು.

11. ಬೆಂಗಳೂರಿನ 37 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಯೋಜನೆಯ ಪರಿಷ್ಕೃತ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು.

12. ಬೆಂಗಳೂರು ಮೆಟ್ರೋ ಹಂತ-2ರ 72 ಕಿಲೋಮೀಟರ್ ವಿಸ್ತರಣೆಯ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ನೀಡಬೇಕು.

13. ಸರ್ಜಾಪುರ-ಹೆಬ್ಬಾಳ ಸುರಂಗ ಮಾರ್ಗ ರಸ್ತೆ ಯೋಜನೆಯ ಪರಿಷ್ಕೃತ ಡಿಪಿಆರ್‌ಗೆ ಮಂಜೂರಾತಿ ನೀಡಬೇಕು.

14. ಬೆಂಗಳೂರು, ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ನಡುವೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಜಾರಿಗೆ ಅನುಮೋದನೆ ನೀಡಬೇಕು.

15. ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನ ಮತ್ತು ಮಂಜೂರಾತಿಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು.

16. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅಗತ್ಯವಿರುವ ಅರಣ್ಯ, ಪರಿಸರ ಹಾಗೂ ವನ್ಯಜೀವಿ ಸಂಬಂಧಿತ ಅನುಮತಿಗಳನ್ನು ಶೀಘ್ರಗತಿಯಲ್ಲಿ ನೀಡಬೇಕು.

17. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ವರ್ಷ ₹25,000 ಕೋಟಿ ವಿಶೇಷ ಆರ್ಥಿಕ ನೆರವು ಒದಗಿಸಬೇಕು.

18. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ತ್ವರಿತ ಅನುಮೋದನೆ ನೀಡಬೇಕು.

 

ರಾಜ್ಯದ ನೀರಾವರಿ, ಸಾರಿಗೆ, ಮೂಲಸೌಕರ್ಯ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ಈ ಬೇಡಿಕೆಗಳಿಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ.