17 June 2026 |

ತಾರಬಳಿ ಸೇತುವೆ ಕುಸಿತ: ಹಲವು ಗ್ರಾಮಗಳ ಸಂಪರ್ಕ ಕಡಿತ

  • 16 Jun 2026 01:07:06 PM

ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಸಮೀಪದ ತಾರಬಳಿ ಸಂಪರ್ಕ ಸೇತುವೆ ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಜನರು ತೀವ್ರ ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲ ಆರಂಭವಾದ ಬೆನ್ನಲ್ಲೇ ಸಂಭವಿಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

 

ಕಿರಲೆ, ಭಟ್ಟಾಜೆ, ಸೊರ್ನಾಡು, ಎರ್ಮಲಪದವು, ಕುರಿಯಾಳ, ಬಾಳಿಕೆ ಹಾಗೂ ಬಂಡಸಾಲೆ ಗ್ರಾಮಗಳನ್ನು ಕೊಳತ್ತಮಜಲು, ಬಡಗಬೆಳ್ಳೂರು ಮತ್ತು ಪೊಳಲಿ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದ ತಾರಬಳಿ ಸೇತುವೆ ಇದೀಗ ಬಳಕೆಗೆ ಅಸಾಧ್ಯವಾಗಿದೆ. ಪರಿಣಾಮ ನಿತ್ಯ ಸಂಚಾರ ನಡೆಸುತ್ತಿದ್ದ ನೂರಾರು ಜನರು ಪರ್ಯಾಯ ಮಾರ್ಗಗಳನ್ನು ಅವಲಂಬಿಸುವಂತಾಗಿದೆ.

 

ಕಳೆದ ಕೆಲವು ತಿಂಗಳುಗಳಿಂದಲೇ ಸೇತುವೆಯ ಸ್ಥಿತಿ ಹದಗೆಟ್ಟಿದ್ದು, ಅಪಾಯದ ಮುನ್ಸೂಚನೆಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಈಗಾಗಲೇ ನಿಷೇಧಿಸಲಾಗಿತ್ತು. ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದರೂ, ಸೇತುವೆಯ ದುರ್ಬಲತೆ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ಪದೇಪದೇ ಎಚ್ಚರಿಕೆ ನೀಡಿದ್ದರು.

 

ಜೀವಹಾನಿ ಸಂಭವಿಸುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರೂ, ಇದೀಗ ಸೇತುವೆ ಕುಸಿದು ಬಿದ್ದಿದೆ. ಸದ್ಯ ಸ್ಥಳದಲ್ಲಿ ಕುಸಿದ ಕಾಂಕ್ರೀಟ್ ಕಂಬಗಳು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ದುರಸ್ತಿ ಕಾಮಗಾರಿಯೂ ಆರಂಭಗೊಂಡಿದೆ.