ಬಂಟ್ವಾಳ: ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಘಟನೆ ಬಿ.ಸಿ.ರೋಡ್‌ನ ನಾಗ ಕ್ಯಾಂಟೀನ್‌ನಲ್ಲಿ ನಡೆದಿದ್ದು, ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಕ್ಯಾಂಟೀನ್‌ನ ಹಿಂಭಾಗದಲ್ಲಿ ದೋಸೆ ತಯಾರಿಕಾ ವಿಭಾಗದಲ್ಲಿ ಬಳಸಲಾಗುತ್ತಿದ್ದ ಗ್ಯಾಸ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ಸೋರಿಕೆ ಸಂಭವಿಸಿದೆ ಎನ್ನಲಾಗಿದೆ. ಇದರ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕೆಲಸದಲ್ಲಿದ್ದ ವಿಶ್ವನಾಥ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.
ಘಟನೆಯಲ್ಲಿ ಮಾಲೀಕರ ಸಹೋದರ ಹರೀಶ್ ಅವರಿಗೂ ಗಾಯಗಳಾಗಿದ್ದು, ಇಬ್ಬರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಇದರಿಂದ ಹೆಚ್ಚಿನ ಹಾನಿ ಸಂಭವಿಸುವುದನ್ನು ತಡೆಯಲಾಗಿದೆ.





