ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯದೆ ಮಧ್ಯಂತರವಾಗಿ ಕಾಣಿಸಿಕೊಳ್ಳುತ್ತಿರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒಂದೆಡೆ ಮಳೆ, ಮತ್ತೊಂದೆಡೆ ತೀವ್ರ ಬಿಸಿಲು ಮತ್ತು ಹೆಚ್ಚಿದ ತೇವಾಂಶದ ವಾತಾವರಣದಿಂದ ವಿವಿಧ ರೀತಿಯ ಸಾಂಕ್ರಾಮಿಕ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ.
ಜಿಲ್ಲೆಯಲ್ಲಿ ಈಗಾಗಲೇ 20 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮಳೆಯ ನೀರು ಮನೆಗಳ ಸುತ್ತಮುತ್ತ ಹಾಗೂ ಖಾಲಿ ಪ್ರದೇಶಗಳಲ್ಲಿ ನಿಂತುಕೊಳ್ಳುತ್ತಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹಳೆಯ ಟೈರ್‌ಗಳು, ಚರಂಡಿಗಳು ಮತ್ತು ನೀರು ಸಂಗ್ರಹವಾಗಿರುವ ಪಾತ್ರೆಗಳು ಡೆಂಗ್ಯೂ ಹರಡುವ ಸೊಳ್ಳೆಗಳ ತಾಣಗಳಾಗಿ ಪರಿಣಮಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಜೊತೆಗೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ವೈರಲ್ ಜ್ವರದ ಪ್ರಕರಣಗಳೂ ಹೆಚ್ಚಾಗುತ್ತಿವೆ. ಕೆಮ್ಮು, ಶೀತ, ಗಂಟಲು ನೋವು, ದೇಹದ ನೋವು ಹಾಗೂ ಹಲವು ದಿನಗಳ ಕಾಲ ಜ್ವರ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಡೆಂಗ್ಯೂ ಮತ್ತು ವೈರಲ್ ಜ್ವರದ ಆರಂಭಿಕ ಲಕ್ಷಣಗಳು ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದರಿಂದ ರೋಗದ ನಿಖರ ಗುರುತಿಸುವಿಕೆ ವೈದ್ಯರಿಗೆ ಸವಾಲಾಗುತ್ತಿದೆ.
ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಮೂಡುಬಿದಿರೆ ಭಾಗಗಳಲ್ಲಿ ಜ್ವರ, ಶೀತ-ಕೆಮ್ಮು, ಉಸಿರಾಟದ ತೊಂದರೆ ಮತ್ತು ಚರ್ಮರೋಗಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳು ಹಾಗೂ ಹಿರಿಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದು, ಹೆಚ್ಚಿದ ತೇವಾಂಶದಿಂದ ಅಲರ್ಜಿ, ಫಂಗಲ್ ಸೋಂಕು ಮತ್ತು ಕಾಲಿನ ಸೋಂಕುಗಳೂ ಹೆಚ್ಚಾಗಿವೆ. ನೀರಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವ ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಹೆಚ್ಚು ಅಪಾಯಕ್ಕೆ ಒಳಗಾಗುತ್ತಿದ್ದಾರೆ.
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಲ್ಲಿ ಬಳಸುವ ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುವಂತೆ ಜಿಲ್ಲಾ ಪಂಚಾಯಿತಿ ಸೂಚಿಸಿದೆ. ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ನೀರಿನ ಮೂಲಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ಸುರಕ್ಷಿತ ನೀರಿನ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಕಾರ್ಯವನ್ನು ಜಿಲ್ಲೆಯಲ್ಲಿ ಇನ್ನಷ್ಟು ವೇಗಗೊಳಿಸಲು ಸಂಬಂಧಿತ ಇಲಾಖೆಗಳು ಕ್ರಮ ಕೈಗೊಂಡಿವೆ.
ಮಳೆಗಾಲದ ಅಂತ್ಯದ ವೇಳೆಗೆ ಸಾಮಾನ್ಯವಾಗಿ ಡೆಂಗ್ಯೂ ಸೇರಿದಂತೆ ಇಂತಹ ಸೋಂಕುಗಳ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಈ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಸೋಂಕು ಸಮಾನವಾಗಿ ಹರಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.





