17 June 2026 |

ಕಡಬದಲ್ಲಿ ಅಕ್ರಮ ಜಾನುವಾರು ಸಾಗಾಟ ಬಯಲು: ಪಲ್ಟಿಯಾದ ವಾಹನ, ಇಬ್ಬರ ವಿರುದ್ಧ ಕೇಸ್

  • 16 Jun 2026 02:42:23 PM

ಕಡಬ: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಲ್ಲೆ ರಸ್ತೆಯ ಡಿಪ್ರೊ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಆರೋಪಿಗಳಾಗಿ ಗುರುತಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳಾದ ಚಂದ್ರಶೇಖರ ಹಾಗೂ ಮೋಹನ ಎಂಬವರು ವಾಹನದಲ್ಲಿ ಎರಡು ಜಾನುವಾರುಗಳನ್ನು ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ.

 

ಅಪಘಾತದ ನಂತರ ಆರೋಪಿಗಳು ಜಾನುವಾರುಗಳನ್ನು ವಾಹನದಿಂದ ಇಳಿಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಸಮೀಪದಲ್ಲೇ ಎರಡು ಜಾನುವಾರುಗಳು ಪತ್ತೆಯಾಗಿವೆ.

 

ಪೊಲೀಸರು ಜಾನುವಾರುಗಳು ಹಾಗೂ ಪಿಕಪ್ ವಾಹನವನ್ನು ವಶಪಡಿಸಿಕೊಂಡು ಕರ್ನಾಟಕ ಗೋವುಗಳ ಸಂರಕ್ಷಣಾ ಕಾಯ್ದೆ, ಪ್ರಾಣಿ ಸಂರಕ್ಷಣಾ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.