ಮಣಿಪಾಲ: ಕ್ಷಣಮಾತ್ರದ ಸಮಯಪ್ರಜ್ಞೆ ಮತ್ತು ಧೈರ್ಯವು 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವವನ್ನು ರಕ್ಷಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಶಿಕ್ಷಣ ಸಂಸ್ಥೆಯ ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ಮುಂದೆ ಸಾಗತೊಡಗಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದಾಗ, ಮಾಧವ ಕೃಪಾ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಂಶೆಲ್ ಶರುನ್ ರವರು ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದಾನೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿದ್ಯಾರ್ಥಿ ತಕ್ಷಣ ಮುಂದಕ್ಕೆ ಧಾವಿಸಿ ಬಸ್‌ನ ಹ್ಯಾಂಡ್ ಬ್ರೇಕ್ ಎಳೆದು ವಾಹನವನ್ನು ನಿಯಂತ್ರಣಕ್ಕೆ ತಂದಿದ್ದಾನೆ. ಆತನ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದ್ದು, ಬಸ್‌ನಲ್ಲಿದ್ದ ಸುಮಾರು 40 ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.
ವಿದ್ಯಾರ್ಥಿಯ ಈ ಸಾಹಸಿಕ ಕಾರ್ಯಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅನಿರೀಕ್ಷಿತ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸಿದ ಈ ವಿದ್ಯಾರ್ಥಿ ಹಲವರಿಗೆ ಮಾದರಿಯಾಗಿದ್ದಾನೆ.
ಒಂದು ಕ್ಷಣದ ಸಮಯಪ್ರಜ್ಞೆ, ಧೈರ್ಯ ಮತ್ತು ಜವಾಬ್ದಾರಿಯ ಮನೋಭಾವ 40 ಜೀವಗಳನ್ನು ಕಾಪಾಡಿದ ಈ ಘಟನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರವರು ಕೂಡ ಇಂದು ಇನ್ನಿತರ ಪಕ್ಷದ ನಾಯಕರುಗಳ ಜೊತೆ ಶಾಲೆಗೆ ಭೇಟಿ ನೀಡಿ ಅಂಶೆಲ್ ಶರುನ್ ರವರನ್ನು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.





