21 June 2026 |

'ಬರ್ಸ ಇಜ್ಜಿ ಮಾರ್ರೆ... ಶೆಕೆಟ್ ಕುಲ್ಲರೆ ಆಪುಜಿ!' : ಜೂನ್ ಅರ್ಧ ಕಳೆದರೂ ಮಳೆ ಕಾಣದ ಕರಾವಳಿಯಲ್ಲಿ ಹೆಚ್ಚಿದ ಆತಂಕ

  • 18 Jun 2026 10:56:05 AM

ಮಂಗಳೂರು/ಉಡುಪಿ: "ನೀವು ಹೇಗಿದ್ದೀರಿ?" ಎಂದು ಕೇಳುವ ಮೊದಲೇ "ಬರ್ಸ ಇಜ್ಜಿ ಮಾರ್ರೆ... ಶೆಕೆಟ್ ಕುಲ್ಲರೆ ಆಪುಜಿ!" ಎಂಬ ಮಾತು ಕೇಳಿಬರುತ್ತಿದೆ. ಸಾಮಾನ್ಯವಾಗಿ ಜೂನ್ ತಿಂಗಳು ಅಂದರೆ ಕರಾವಳಿಯಲ್ಲಿ ನಿರಂತರ ಮಳೆ, ಮೋಡ ಕವಿದ ವಾತಾವರಣ, ತುಂಬಿ ಹರಿಯುವ ನದಿಗಳು, ಕೆರೆಗಳು, ಹಸಿರಿನಿಂದ ಕಂಗೊಳಿಸುವ ಹೊಲಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ಬಾರಿ ಚಿತ್ರಣ ಸ್ವಲ್ಪ ವಿಭಿನ್ನವಾಗಿದೆ.

 

ಕಳೆದ ವರ್ಷ ಇದೇ ಸಮಯದಲ್ಲಿ ನೇತ್ರಾವತಿ, ಕುಮಾರಧಾರಾ, ಫಣಿಯಾರ, ಸೀತಾ ಹಾಗೂ ಸ್ವರ್ಣಾ ನದಿಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದವು. ಹಲವೆಡೆ ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು. ಆದರೆ ಈ ವರ್ಷ ಮಳೆ ಒಂದೆರಡು ದಿನ ಸುರಿದು ಮತ್ತೆ ಕಾಣೆಯಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

 

ಮಳೆಗಾಲದಲ್ಲಿ ಬಿಸಿಲು ಕಾಣುವುದು ಸಾಮಾನ್ಯವಾದರೂ, ಈ ಬಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೆಖೆ ಜನರನ್ನು ಕಂಗೆಡಿಸಿದೆ. ಬೆಳಗ್ಗೆ ಸ್ವಲ್ಪ ಮೋಡ ಕವಿದ ವಾತಾವರಣ ಕಂಡರೂ ಮಧ್ಯಾಹ್ನದ ವೇಳೆಗೆ ಸುಡು ಬಿಸಿಲು ಆವರಿಸುತ್ತಿದೆ. ಸಂಜೆ ವೇಳೆಗೆ ಮಳೆ ಬರುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಜನರು ಆಕಾಶದತ್ತ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಕೃಷಿಕರ ಕಳವಳ
ಕರಾವಳಿಯ ಕೃಷಿ ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿದೆ. ಭತ್ತದ ನಾಟಿ, ಅಡಿಕೆ ತೋಟಗಳು, ತರಕಾರಿ ಬೆಳೆಗಳು ಸೇರಿದಂತೆ ಅನೇಕ ಕೃಷಿ ಚಟುವಟಿಕೆಗಳಿಗೆ ನಿರಂತರ ಮಳೆ ಅಗತ್ಯ. ಆದರೆ ಮಳೆ ಕೈಕೊಟ್ಟಿರುವುದರಿಂದ ಹಲವೆಡೆ ಕೃಷಿಕರು ನಾಟಿ ಕಾರ್ಯ ಆರಂಭಿಸಲು ಹಿಂಜರಿಯುತ್ತಿದ್ದಾರೆ. "ಒಂದು ದಿನ ಮಳೆ, ಮೂರು ದಿನ ಬಿಸಿಲು" ಎಂಬ ಸ್ಥಿತಿ ಮುಂದುವರಿದರೆ ಬೀಜ ಬಿತ್ತನೆ ಮತ್ತು ನಾಟಿ ಕಾರ್ಯಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

 

ತುಂಬಿ ಹರಿಯಬೇಕಿದ್ದ ನದಿಗಳು ಇನ್ನೂ ಕಾಯುತ್ತಿವೆ
ಸಾಮಾನ್ಯವಾಗಿ ಜೂನ್ ಮಧ್ಯಭಾಗಕ್ಕೆ ಕರಾವಳಿಯ ಬಹುತೇಕ ನದಿಗಳು, ಹೊಳೆಗಳು ಹಾಗೂ ಕೆರೆಗಳು ತುಂಬಿ ಹರಿಯಲು ಆರಂಭಿಸುತ್ತವೆ. ಆದರೆ ಈ ಬಾರಿ ಅನೇಕ ಕಡೆಗಳಲ್ಲಿ ನೀರಿನ ಹರಿವು ನಿರೀಕ್ಷಿತ ಮಟ್ಟ ತಲುಪಿಲ್ಲ. ಮಳೆಗಾಲದಲ್ಲಿಯೇ ನದಿಗಳಲ್ಲಿ ಕಡಿಮೆ ನೀರು ಕಾಣುವುದು ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

 

ಹವಾಮಾನ ಬದಲಾವಣೆಯ ಎಚ್ಚರಿಕೆಯೇ?
ಹಿರಿಯರು ಹೇಳುವಂತೆ, "ಹಿಂದೆ ಮಳೆಗಾಲ ಅಂದರೆ ಮಳೆಗಾಲವೇ. ಈಗ ಯಾವ ಕಾಲದಲ್ಲಿ ಏನು ಆಗುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ." ಕಳೆದ ಕೆಲವು ವರ್ಷಗಳಿಂದ ಮಳೆ ಮಾದರಿಯಲ್ಲಿ ಆಗುತ್ತಿರುವ ಬದಲಾವಣೆಗಳು ಹವಾಮಾನ ತಜ್ಞರ ಗಮನವನ್ನೂ ಸೆಳೆದಿವೆ. ಒಂದೇ ದಿನ ಧಾರಾಕಾರ ಮಳೆ ಸುರಿದು ನಂತರ ಹಲವು ದಿನ ಮಳೆ ಇಲ್ಲದಿರುವುದು, ಅಕಾಲಿಕ ಬಿಸಿಲು, ತಾಪಮಾನ ಏರಿಕೆ ಮೊದಲಾದ ಲಕ್ಷಣಗಳು ಹವಾಮಾನ ಬದಲಾವಣೆಯ ಪರಿಣಾಮವಾಗಿರಬಹುದು ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.

 

ಮುಂದಿನ ದಿನಗಳ ನಿರೀಕ್ಷೆ
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರೂ, ಜನರು ಇನ್ನೂ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷಗಳಂತೆ ನಿರಂತರ ಮಳೆ ಸುರಿದು ನದಿಗಳು ತುಂಬಿ ಹರಿಯುವ ದೃಶ್ಯಕ್ಕಾಗಿ ಕರಾವಳಿ ಜನ ಕಾಯುತ್ತಿದ್ದಾರೆ.

ಸದ್ಯಕ್ಕೆ ಮಾತ್ರ...

"ಬರ್ಸ ಇಜ್ಜಿ ಮಾರ್ರೆ...
ಶೆಕೆಟ್ ಕುಲ್ಲರೆ ಆಪುಜಿ...
ಇಂಚ ಆಂಡ ಎಂಚ!"

ಎಂಬ ಮಾತೇ ಕರಾವಳಿಯ ಮನೆಮನೆಗಳಲ್ಲಿ, ಅಂಗಡಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು ಚಹಾ ಅಂಗಡಿಗಳಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಸಂಭಾಷಣೆಯಾಗಿದೆ.