20 June 2026 |

ಪುಸ್ತಕಗಳಿಗಾಗಿ ವಿದ್ಯಾರ್ಥಿಗಳ ಕಾಯುವಿಕೆ, ಮೊಟ್ಟೆ ವೆಚ್ಚಕ್ಕೆ ಶಿಕ್ಷಕರ ಹಣ; ಬಂಟ್ವಾಳದಲ್ಲಿ ಶಿಕ್ಷಣ ವ್ಯವಸ್ಥೆ ಬಗ್ಗೆ ಮೂಡಿರುವ ಪ್ರಶ್ನೆಗಳು

  • 19 Jun 2026 11:31:01 AM

ಬಂಟ್ವಾಳ: ಶೈಕ್ಷಣಿಕ ವರ್ಷ ಆರಂಭವಾಗಿ ಹಲವು ದಿನಗಳು ಕಳೆದಿದ್ದರೂ ಬಂಟ್ವಾಳ ತಾಲೂಕಿನ ಸರ್ಕಾರಿ ಶಾಲೆಗಳ ಅನೇಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಇನ್ನೂ ದೊರೆಯದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಪುಸ್ತಕಗಳು ತಾಲೂಕಿಗೆ ತಲುಪಿದ್ದರೂ ಅವು ಶಾಲೆಗಳಿಗೆ ವಿತರಣೆ ಆಗದೇ ಗೋದಾಮಿನಲ್ಲೇ ಉಳಿದಿವೆ ಎಂಬ ಆರೋಪ ಕೇಳಿಬಂದಿದೆ.

 

ತಾಲೂಕಿನ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮುಂಚಿತವಾಗಿಯೇ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿದ್ದರೂ, ವಿತರಣೆಯಲ್ಲಿ ಉಂಟಾದ ವಿಳಂಬದಿಂದ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಪಾಠ ಕಲಿಕೆ ಪ್ರಕ್ರಿಯೆ ಹಿನ್ನಡೆಯಾಗುತ್ತಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಇದೇ ವೇಳೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ನೀಡಲಾಗುವ ಕೋಳಿಮೊಟ್ಟೆಯ ವೆಚ್ಚದಲ್ಲಿಯೂ ಸಮಸ್ಯೆ ಎದುರಾಗಿದೆ. ಮಾರುಕಟ್ಟೆ ದರ ಮತ್ತು ಸರ್ಕಾರ ನೀಡುವ ಅನುದಾನದ ನಡುವೆ ಇರುವ ವ್ಯತ್ಯಾಸವನ್ನು ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ಭರಿಸುತ್ತಿದ್ದಾರೆ ಎನ್ನಲಾಗಿದೆ. ಪ್ರತಿದಿನ ಹೆಚ್ಚುವರಿ ವೆಚ್ಚವನ್ನು ಹೊತ್ತುಕೊಳ್ಳುತ್ತಿರುವ ಶಿಕ್ಷಕರು ಶೀಘ್ರ ಪರಿಹಾರಕ್ಕೆ ಆಗ್ರಹಿಸಿದ್ದಾರೆ.