ಮಂಗಳೂರು: ಪೂರ್ವ ಪರಿಶೀಲನೆ ಹಾಗೂ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ 30ಕ್ಕೂ ಹೆಚ್ಚು ಮಂದಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅಮಾನತುಗೊಳಿಸಿದ್ದಾರೆ.
ಅಮಾನತುಗೊಂಡವರಲ್ಲಿ ಠಾಣೆಯ ಮಹಿಳಾ ಸಿಬ್ಬಂದಿ ಆಶಾ ಹಾಗೂ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಸೇರಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಇಬ್ಬರು ಸಿಬ್ಬಂದಿ ಸೇರಿ ಒಟ್ಟು 31 ಮಂದಿಗೆ ನಿಯಮ ಉಲ್ಲಂಘಿಸಿ ಪಿಸಿಸಿ ನೀಡಿರುವುದು ಬೆಳಕಿಗೆ ಬಂದಿದೆ. ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ಈ ಕುರಿತು ಮಾಹಿತಿ ಲಭಿಸಿದ ಬಳಿಕ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅದರ ಆಧಾರದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಅಸ್ಸಾಂ ಹಾಗೂ ಬಿಹಾರ್ ಮೂಲದ ಕೆಲವು ಕಾರ್ಮಿಕರಿಗೆ ಅಗತ್ಯ ಹಿನ್ನೆಲೆ ಪರಿಶೀಲನೆ ನಡೆಸದೆ ಪಿಸಿಸಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇವರಲ್ಲಿ ಕೆಲವರ ವಿರುದ್ಧ ಕ್ರಿಮಿನಲ್ ಚಟುವಟಿಕೆಗಳು ಹಾಗೂ ದೇಶವಿರೋಧಿ ಕೃತ್ಯಗಳ ಕುರಿತು ಮಾಹಿತಿ ಇರುವುದಾಗಿ ತಿಳಿದುಬಂದಿದ್ದು, ಇದು ಇಲಾಖೆಯ ಗಂಭೀರ ನಿರ್ಲಕ್ಷ್ಯವಾಗಿ ಪರಿಗಣಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆಯ ಹೊಣೆಗಾರಿಕೆಯನ್ನು ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ.
ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸಲು ಬಂದಿದ್ದ ಕೆಲವರು ತಾತ್ಕಾಲಿಕ ವಿಳಾಸದ ಆಧಾರದಲ್ಲಿ ಮಧ್ಯವರ್ತಿಗಳ ನೆರವಿನಿಂದ ಪಾಸ್‌ಪೋರ್ಟ್ ಪ್ರಕ್ರಿಯೆಗೆ ಅಗತ್ಯವಿರುವ ಪಿಸಿಸಿಯನ್ನು ಸುಲಭವಾಗಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಈ ರೀತಿಯಾಗಿ ಪ್ರಮಾಣಪತ್ರ ಪಡೆದ 31 ಮಂದಿಯಲ್ಲಿ ಕೆಲವರು ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧ ಹೊಂದಿದ್ದಾರೆ ಎನ್ನುವ ಮಾಹಿತಿ ಕೇಂದ್ರ ತನಿಖಾ ಸಂಸ್ಥೆಗೆ ಲಭಿಸಿದ ಬಳಿಕ ವಿಷಯ ಗಂಭೀರ ಸ್ವರೂಪ ಪಡೆದಿದೆ.
ಇನ್ನೊಂದೆಡೆ, ಠಾಣೆಯ ಅಧಿಕಾರಿಗಳ ಅಧಿಕೃತ ಲಾಗಿನ್ ಪಾಸ್‌ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಪಿಸಿಸಿ ನೀಡಲಾಗಿದೆ ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಕ್ಕಾಗಿ ಮಧ್ಯವರ್ತಿಗಳಾದ ಭರತ್ ಎಕ್ಕಾರು ಹಾಗೂ ಮಮತಾ ಅವರಿಂದ ಹಣ ಸ್ವೀಕರಿಸಿರುವ ಆರೋಪವೂ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಎಕ್ಕಾರು ಮತ್ತು ಮಮತಾ ಅವರನ್ನು ಬಜಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ BNS ಕಲಂ 336(2), 336(3), 340(2), 316(5) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ





