21 June 2026 |

ಉಪ್ಪಿನಂಗಡಿಯಲ್ಲಿ ನದಿ ನೀರಿನ ಮಟ್ಟ ಕುಸಿತ; ವೈರಲ್ ಚಿತ್ರಗಳು ಜನರಲ್ಲಿ ಕಳವಳ

  • 20 Jun 2026 03:27:42 AM

ಉಪ್ಪಿನಂಗಡಿ : ಸಂಗಮ ಕ್ಷೇತ್ರವಾಗಿ ಹೆಸರಾಗಿರುವ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಎದುರಿನ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ನದಿಯ ಮಧ್ಯೆ ಮರಳು ಗೋಚರಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

 

2025ರ ಜೂನ್ 15 ಮತ್ತು 2026ರ ಜೂನ್ 15ರಂದು ತೆಗೆದ ನದಿಯ ದೃಶ್ಯಗಳನ್ನು ಹೋಲಿಕೆ ಮಾಡಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ನೇತ್ರಾವತಿ–ಕುಮಾರಧಾರ ನದಿಗಳ ಸಂಗಮ ತಾಣವೆಂದು ಪ್ರಸಿದ್ಧಿ ಪಡೆದಿರುವ ಈ ಪ್ರದೇಶದಲ್ಲಿ ಈ ವರ್ಷ ನೀರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

 

ಕಳೆದ ವರ್ಷ ಮೇ 17ರಿಂದಲೇ ಮಳೆಯ ಆರಂಭವಾಗಿದ್ದು, ನಿರಂತರ ಮಳೆಯ ಪರಿಣಾಮವಾಗಿ ಸಹಸ್ರಲಿಂಗೇಶ್ವರ ದೇವಸ್ಥಾನದ ಸಮೀಪ ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಸಮೃದ್ಧವಾಗಿ ಹರಿಯುತ್ತಿದ್ದವು. ಆದರೆ ಈ ಬಾರಿ ಮುಂಗಾರು ತಡವಾಗಿ ಆರಂಭವಾದ ಕಾರಣ ಪರಿಸ್ಥಿತಿ ಭಿನ್ನವಾಗಿದೆ.

 

ಪ್ರಸ್ತುತ ತೀವ್ರ ಬಿಸಿಲಿನ ವಾತಾವರಣ ಮುಂದುವರಿದಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಇಳಿಕೆಯಾಗಿದೆ. ಇದರ ಪರಿಣಾಮ ಕೃಷಿಕರಲ್ಲಿ ಕಳವಳ ಹೆಚ್ಚಿದ್ದು, ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಭತ್ತದ ಕೃಷಿ ಚಟುವಟಿಕೆಗಳೂ ವಿಳಂಬವಾಗಿವೆ.