21 June 2026 |

ಮಂಗಳೂರು ಹನಿಟ್ರಾಪ್ ಪ್ರಕರಣ: ಇಬ್ಬರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

  • 20 Jun 2026 11:19:14 AM

ಮಂಗಳೂರು: ನಗರದ ಖ್ಯಾತ ಉದ್ಯಮಿಯೊಬ್ಬರನ್ನು ಸಲಿಂಗಕಾಮಕ್ಕೆ ಸಂಬಂಧಿಸಿದ ವಿಡಿಯೊದ ಮೂಲಕ ಬೆದರಿಕೆ ಹಾಕಿ 2.77 ಕೋಟಿ ರೂ. ಹಣ ಪಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

 

ಈ ಪ್ರಕರಣದಲ್ಲಿ ಉದ್ಯಮಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಜಾಮ್ ಅಲಿಯಾಸ್ ಇಬ್ರಾಹಿಂ ಹಾಗೂ ಜಿತೇಶ್ ವಿರುದ್ಧ ಉದ್ಯಮಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಿದ್ದರು. ಬಳಿಕ ಅವರನ್ನು ಪ್ರಧಾನ ಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

 

ಇದೀಗ ಆರೋಪಿಗಳ ಪರ ವಕೀಲರು ಮಂಡಿಸಿದ ವಾದಗಳನ್ನು ಪರಿಗಣಿಸಿದ ನ್ಯಾಯಾಲಯ, ನಿಜಾಮ್ ಅಲಿಯಾಸ್ ಇಬ್ರಾಹಿಂ ಮತ್ತು ಜಿತೇಶ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

 

ನಿಜಾಮ್ ಅಲಿಯಾಸ್ ಇಬ್ರಾಹಿಂ ಪರವಾಗಿ ವಕೀಲ ಜೀಷನ್ ಅಲಿ ಸುರತ್ಕಲ್ ಹಾಗೂ ಯುವ ವಕೀಲ ತಾಜುದ್ದೀನ್ ವಾದ ಮಂಡಿಸಿದರೆ, ಜಿತೇಶ್ ಪರವಾಗಿ ವಕೀಲ ವಿಕ್ರಂ ನ್ಯಾಯಾಲಯದಲ್ಲಿ ವಾದಿಸಿದರು.